ನವದೆಹಲಿ: ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಜಾಮೀನು ಅರ್ಜಿಗಳು ತಿಂಗಳುಗಟ್ಟಲೆ ಬಾಕಿ ಉಳಿಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅವುಗಳ ಶೀಘ್ರ ವಿಲೇವಾರಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ. “ವೈಯಕ್ತಿಕ ಸ್ವಾತಂತ್ರ್ಯವು ಅತ್ಯಂತ ಅಮೂಲ್ಯವಾದುದು” ಎಂದು ಪ್ರತಿಪಾದಿಸಿರುವ ನ್ಯಾಯಾಲಯ, ಹೈಕೋರ್ಟ್‌ಗಳು ಮತ್ತು ತನಿಖಾ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಕೆಲಸ ಮಾಡುವಂತೆ ಸೂಚಿಸಿದೆ.
ಹೈಕೋರ್ಟ್‌ಗಳು ಜಾಮೀನು ಅರ್ಜಿಗಳನ್ನು ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಕಡ್ಡಾಯವಾಗಿ ವಿಚಾರಣೆಗೆ ಪಟ್ಟಿ ಮಾಡಬೇಕು. ಸಾಫ್ಟ್‌ವೇರ್ ಆಧಾರಿತ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಈ ಪ್ರಕ್ರಿಯೆ ನಡೆಯಬೇಕು.
ಹೊಸದಾಗಿ ಸಲ್ಲಿಕೆಯಾಗುವ ಜಾಮೀನು ಅರ್ಜಿಗಳನ್ನು ಸಲ್ಲಿಕೆಯಾದ ಒಂದು ವಾರದೊಳಗೆ ಅಥವಾ ಪರ್ಯಾಯ ಕೆಲಸದ ದಿನಗಳಲ್ಲಿ ವಿಚಾರಣೆಗೆ ತೆಗೆದುಕೊಳ್ಳಬೇಕು.
ಜಾಮೀನು ಅರ್ಜಿಗಳ ಅಂತಿಮ ವಿಲೇವಾರಿಗಾಗಿ ಹೈಕೋರ್ಟ್‌ಗಳು ಒಂದು ನಿರ್ದಿಷ್ಟ ಕಾಲಮಿತಿಯನ್ನು (Deadline) ನಿಗದಿಪಡಿಸಿಕೊಳ್ಳಬೇಕು.ಸರ್ಕಾರಿ ವಕೀಲರು ಅಥವಾ ತನಿಖಾ ಸಂಸ್ಥೆಗಳು ಕೇಳುವ ‘ಕ್ಯಾಶುವಲ್ ಅಡ್ಜರ್ನ್‌ಮೆಂಟ್’ (ಸಾಮಾನ್ಯ ಮುಂದೂಡಿಕೆ) ಗಳನ್ನು ನ್ಯಾಯಾಲಯಗಳು ಪ್ರೋತ್ಸಾಹಿಸಬಾರದು.
ಮೊದಲ ವಿಚಾರಣೆಯ ಮೊದಲೇ ತನಿಖಾ ಸಂಸ್ಥೆಗಳು ‘ಸ್ಟೇಟಸ್ ರಿಪೋರ್ಟ್’ (Status Report) ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ವಿಚಾರಣೆ ವಿಳಂಬವಾಗುವುದನ್ನು ತಪ್ಪಿಸಬಹುದು.







