ಮಂಗಳೂರು : ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನು ಶುದ್ಧೀಕರಣಗೊಳಿಸಲು ಈ ಬಾರಿಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ರಘುಪತಿ ಭಟ್ ಅವರನ್ನು ಬೆಂಬಲಿಸುವಂತೆ ಮಾಜಿ ಸಚಿವ ಈಶ್ವರಪ್ಪ ಅವರು ಪದವೀಧರ ಮತದಾರರನ್ನು ವಿನಂತಿಸಿದ್ದಾರೆ.
ಮಂಗಳೂರಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಈಗ ಅಪ್ಪ, ಮಕ್ಕಳ ಪಕ್ಷವಾಗಿದೆ. ಪಕ್ಷದ ತತ್ವ, ಸಿದ್ಧಾಂತಕ್ಕಿಂತಲೂ ಕುಟುಂಬ ರಾಜಕಾರಣವೇ ಮೇಳೈಸುತ್ತಿದೆ. ಇದನ್ನು ನೋಡಿ ಬಿಜೆಪಿ ನಿಷ್ಠ ಕಾರ್ಯಕರ್ತರಿಗೆ ನೋವಾಗಿದೆ. ಕೇಂದ್ರ ನಾಯಕರೂ ಕೂಡ ಬಿಎಸ್‌ವೈ ಬಿಟ್ಟರೆ ಬೇರೆ ಯಾರೂ ಕರ್ನಾಟಕದಲ್ಲಿ ಇಲ್ಲ ಎನ್ನುವ ಭ್ರಮೆಯಲ್ಲಿ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಟ್ಟಿಲ್ಲವೆಂದು ಸಹಜವಾಗಿ ರಘುಪತಿ ಭಟ್ ಸಮಧಾನಗೊಂಡಿದ್ದರು. ಆದರೆ ಇದೀಗ ವಿಧಾನ ಪರಿಷತ್ ಚುನಾವಣೆಗೂ ಬಿಜೆಪಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಬಂಡಾಯದ ರಘುಪತಿ ಭಟ್ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಇವರನ್ನು ಬೆಂಬಲಿಸಿ ಎಂದು ಕೆ ಎಸ್ ಈಶ್ವರಪ್ಪ ಪದವೀಧರರಿಗೆ ಮನವಿ ಮಾಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಲಾಖೆ ಸಚಿವರ ತಲೆದಂಡ ಪಡೆಯಬೇಕು. ಗುತ್ತಿಗೆದಾರ ಆತ್ಮಹತ್ಯೆ ವಿಚಾರದಲ್ಲಿ ನಾನು ಕೂಡ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದೇನೆ. ಆಗ ನನ್ನ ರಾಜಿನಾಮೆಗೆ ಒತ್ತಾಯಿಸಿದ ಕಾಂಗ್ರೆಸಿಗರು ಈಗ ಯಾಕೆ ಮೌನವಾಗಿದ್ದಾರೆ. ಈ ವಿಚಾರದಲ್ಲಿ ಸಿಎಂ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.