ನವದೆಹಲಿ: ಭಾರತದ ಸ್ಟಾರ್ ಜಾವೆಲಿನ್ ಪಟು, ಪ್ಯಾರಾಲಿಂಪಿಕ್ ಸ್ವರ್ಣ ಪದಕ ವಿಜೇತ ಸುಮಿತ್ ಅಂಟಿಲ್, ತಮ್ಮ ಮಾಜಿ ಕೋಚ್ ನವಲ್ ಸಿಂಗ್ ವಿರುದ್ಧ ಮಾನಸಿಕ ಕಿರುಕುಳ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರದಲ್ಲಿ ಸುಮಿತ್ ಪರವಾಗಿ ಧ್ವನಿ ಎತ್ತಿರುವ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ, ಸದರಿ ಕೋಚ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (SAI) ಪತ್ರ ಬರೆದಿದ್ದಾರೆ.
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ನವಲ್ ಸಿಂಗ್ ಅವರು ಕಳೆದ ಕೆಲವು ಸಮಯದಿಂದ ತಮಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಮತ್ತು ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ ಎಂದು ಸುಮಿತ್ ಅಂಟಿಲ್ ದೂರಿದ್ದಾರೆ.
ಸುಮಿತ್ ಅವರ ದೂರನ್ನು ಪುಷ್ಠೀಕರಿಸಿರುವ ನೀರಜ್ ಚೋಪ್ರಾ, “ನವಲ್ ಸಿಂಗ್ ಅವರು ಕೇವಲ ಸುಮಿತ್ ಮಾತ್ರವಲ್ಲದೆ, ನನ್ನ ಮತ್ತು ನನ್ನ ಕುಟುಂಬದ ಬಗ್ಗೆಯೂ ಅವಮಾನಕರ ಮಾತುಗಳನ್ನು ಆಡಿದ್ದಾರೆ. ಅವರ ಈ ವರ್ತನೆ ಅಕ್ಷಮ್ಯ ಮತ್ತು ಕ್ರೀಡಾಸ್ಫೂರ್ತಿಗೆ ವಿರುದ್ಧವಾದುದು” ಎಂದು ಕಿಡಿಕಾರಿದ್ದಾರೆ.
ಕೋಚ್ ನವಲ್ ಸಿಂಗ್ ಅವರು ಕುಡಿದ ಅಮಲಿನಲ್ಲಿ ಕ್ರೀಡಾಪಟುಗಳ ಕುಟುಂಬವನ್ನು ಎಳೆದು ತಂದು ನಿಂದಿಸಿರುವ ಕೆಲವು ಆಡಿಯೋ ಸಂದೇಶಗಳನ್ನು ಕೂಡ ಪುರಾವೆಯಾಗಿ ನೀಡಲಾಗಿದೆ ಎಂದು ತಿಳಿದುಬಂದಿದೆ.








