ಬೆಂಗಳೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-01 ರಲ್ಲಿ ಅನುತ್ತೀರ್ಣರಾಗಿರುವ ಹಾಗೂ ಫಲಿತಾಂಶ ಸುಧಾರಣೆಗಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಂದಿನಿಂದ ಜೂ.05 ರ ವರೆಗೆ ವಿಶೇಷ ತರಗತಿಗಳನ್ನು ಆಯೋಜಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ.ಉಮಾದೇವಿ ಅವರು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆ-2 ಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಜೂನ್-07 ರಿಂದ ಪರೀಕ್ಷೆಗಳು ನಡೆಯಲಿದ್ದು, ತತ್ಸಂಬಂಧವಾಗಿ 21 ದಿನಗಳ ಕಾಲ ಎಸ್.ಎಸ್.ಎಲ್.ಸಿ ಪರೀಕ್ಷೆ-2 ತಯಾರಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಅವಧಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅನುತ್ತೀರ್ಣರಾದ ಹಾಗೂ ಕಡಿಮೆ ಅಂಕಗಳಿಸಿದ (ಸಿ ಮತ್ತು ಸಿ+) ವಿದ್ಯಾರ್ಥಿಗಳಿಗೆ ರಜಾ ದಿನಗಳನ್ನೊಳಗೊಂಡಂತೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಹಾಗೂ ಹೆಚ್ಚಿನ ಅಂಕ ಪಡೆಯಲು ಸಿದ್ದಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶೇ.75 ಕ್ಕಿಂತ ಕಡಿಮೆ ಹಾಜರಾತಿಯಿಂದಾಗಿ ಪರೀಕ್ಷೆ-1 ರನ್ನು ಬರೆಯಲಾಗದೆ ವಂಚಿತರಾಗಿರುವ ಹಾಗೂ 15 ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಬರೆಯಲು ಅವಕಾಶವಿದೆ.
ಆಯಾ ಶಾಲಾ ಮುಖ್ಯ ಶಿಕ್ಷಕರು ಅರ್ಹ ವಿದ್ಯಾರ್ಥಿಗಳನ್ನು ಪಟ್ಟಿಮಾಟಿ ವಿಶೇಷ ತರಗತಿಗಳ ವೇಳಾ ಪಟ್ಟಿಯನ್ನು ತಯಾರಿಸಬೇಕು. ಆಯಾ ಶಾಲಾ ವಿಷಯ ಶಿಕ್ಷಕರನ್ನೇ ಕರ್ತವ್ಯಕ್ಕೆ ಹಾಜರಾಗಿ ಪರಿಹಾರ ಬೋಧನೆ ಮಾಡಲು ತಿಳಿಸಬೇಕು ಹಾಗೂ ವಿಶೇಷ ತರಗತಿಗಳ ವೇಳಾಪಟ್ಟಿಯನ್ನು ಆಯಾ ಶಾಲೆಗಳ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
ಡಯಟ್ ಪ್ರಾಂಶುಪಾಲರು ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕ ಮಟ್ಟದ ಅಧಿಕಾರಿಗಳು ನಿರಂತರವಾಗಿ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅರ್ಹ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ-2ಗೆ ನಿಯಮಾನುಸಾರ ಕಡ್ಡಾಯವಾಗಿ ನೊಂದಾಯಿಸಿಕೊಳ್ಳುವಂತೆ ಕ್ರಮವಹಿಸಬೇಕು.
ಆಯಾ ಶಾಲಾ ಮುಖ್ಯಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸಲು ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಪ್ರಸ್ತುತ ಬಿಸಿಲಿನ ತಾಪ ಹೆಚ್ಚು ಇರುವುದರಿಂದ ವಿದ್ಯಾರ್ಥಿಗಳ ಹಿತ ದೃಷ್ಡಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಆಯಾ ಶಾಲಾ ಮುಖ್ಯ ಗುರುಗಳು ವಹಿಸಬೇಕು.
ಕರ್ತವ್ಯಕ್ಕೆ ಹಾಜರಾದ ಎಲ್ಲಾ ಶಿಕ್ಷಕರಿಗೆ ಕ.ನಾ.ಸೇ.ನಿ. ಪ್ರಕಾರ ಗಳಕೆ ರಜೆಯನ್ನು ಮಂಜೂರಿಸಬೇಕು. ಮೂರು ದಿನಗಳ ಕರ್ತವ್ಯಕ್ಕೆ ನಿಯಮಾನುಸಾರ ಒಂದು ಗಳಿಕೆ ರಜೆ ದೊರೆಯಲಿದೆ. ಹಾಜರಾದ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಮಾಡಬೇಕು.
10 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳನ್ನು ಸಮೀಪದ ಶಾಲೆಯೊಂದಿಗೆ ಒಗ್ಗೂಡಿಸಿ, ಒಂದೆಡೆ ವಿಶೇಷ ತರಗತಿಗಳನ್ನು ನಡೆಸಲು ಬಿಇಒ ಗಳು ಕ್ರಮವಹಿಸಬೇಕು. ಬೋಧನೆಗಾಗಿ ಆಯಾ ಶಾಲಾ ವ್ಯಾಪ್ತಿಯ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡಲು ಕ್ರಮ ವಹಿಸಬೇಕು.
ವಿಶೇಷ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯ ಸಮಯಕ್ಕೆ ಸರಿಯಾಗಿ ಒದಗಿಸಬೇಕು. ವಿಶೇಷ ತರಗತಿ ಬೆಳಿಗ್ಗೆ 08 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೂ ನಡೆಸಬೇಕು. ಈ ಅವಕಾಶವನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಶಾಲೆಗಳಿಗೆ ಹಾಜರಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.