ಬೆಂಗಳೂರು : ರಾಜ್ಯದ ದ್ವೀತಿಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಮೂಲ ಅಂಕಪಟ್ಟಿಗಳಲ್ಲಿ ಇರುವ ದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳುಮೂಲ ಅಂಕಪಟ್ಟಿಯಲ್ಲಿ ವಿದ್ಯಾರ್ಥಿ ಹೆಸರು, ತಂದೆ, ತಾಯಿ ಹೆಸರುಗಳಲ್ಲಿ ಇರುವ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಮೂಲ ಅಂಕಪಟ್ಟಿಗಳನ್ನು ಕಳೆದುಕೊಂಡ ವಿದ್ಯಾರ್ಥಿಗಳು ಅಂಕಪಟ್ಟಿಯ ದ್ವಿಪತ್ರಿ ಪಡೆಯಬಹುದಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳು ನೇರವಾಗಿ ಅಂಕಪಟ್ಟಿ ತಿದ್ದುಪಡಿ ಹಾಗೂ ದ್ವಿಪತ್ರಿ ಅಂಕಪಟ್ಟಿಗಾಗಿ ನೇರವಾಗಿ ಇಲಾಖೆಗೆ ಅರ್ಜಿ ಸಲ್ಲಿಸುವಂತಿಲ್ಲ. ವಿದ್ಯಾರ್ಥಿಗಳು ಕಲಿತ ಕಾಲೇಜು ಮೂಲಕ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಬೇಕು. ತಿದ್ದುಪಡಿಗಾಗಿ ಸಲ್ಲಿಸುವ ಎಲ್ಲ ಅರ್ಜಿಗಳನ್ನು ಕಡ್ಡಾಯವಾಗಿ ಉಪ ನಿರ್ದೇಶಕರು, ದ್ವಿಪತ್ರಿ ಅಂಕಪಟ್ಟಿ ಶಾಖೆ ಪದವಿ ಪೂರ್ವ ಶಿಕ್ಷಣ ಇಲಾಖೆ, 18ನೇ ಅಡ್ಡ ರಸ್ತೆ ಸಂಪಿಗೆ ರಸ್ತೆ, ಮಲ್ಲೇಶ್ವರಂ ಇಲ್ಲಿಗೆ ಕಾಲೇಜಿನ ಪ್ರಾಂಶುಪಾಲರ ಮೂಲಕ ಸಲ್ಲಿಸಬೇಕು.