ಬೆಂಗಳೂರು: 2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಪಿಜಿ – ಸಿಇಟಿ) ಮುಂದೂಡಲಾಗಿದೆ. ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಜುಲೈ 5 ಮತ್ತು ಜುಲೈ 10ರಿಂದ ಪ್ರಾರಂಭವಾಗುತ್ತಿವೆ. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು” ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಕೆಲವು ವಿಶ್ವವಿದ್ಯಾಲಯಗಳು 2024 ರ ಜುಲೈ 5 ಮತ್ತು 10 ರಿಂದ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಪ್ರಾರಂಭಿಸುತ್ತಿರುವುದರಿಂದ 2024 ರ ಜುಲೈ 13 ಮತ್ತು 14 ರಂದು ನಡೆಯಬೇಕಿದ್ದ ಪಿಜಿಸಿಇಟಿ -2024 ಪರೀಕ್ಷೆಯನ್ನು ಮುಂದೂಡುವಂತೆ ಅನೇಕ ವಿದ್ಯಾರ್ಥಿಗಳು ಕೆಇಎಗೆ ವಿನಂತಿಗಳನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಇಎ 2024ರ ಜುಲೈ 13 ಮತ್ತು 14ರಂದು ನಡೆಯಬೇಕಿದ್ದ ಪಿಜಿಸಿಇಟಿ-2024 ಪರೀಕ್ಷೆಯನ್ನು ಮುಂದೂಡಿದ್ದು, ಪರಿಷ್ಕೃತ ದಿನಾಂಕಗಳನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಅಂತ ತಿಳಿಸಿದೆ.
ಇದಲ್ಲದೆ, ಎಂಬಿಎ, ಎಂಸಿಎ, ಎಂಇ / M.Tech/M.Tech, M.ಆರ್ಕಿಟೆಕ್ಚರ್ ಕೋರ್ಸ್ಗಳ ಪ್ರವೇಶಕ್ಕಾಗಿ ಪಿಜಿಸಿಇಟಿ -2024 ಗೆ ನೋಂದಾಯಿಸಲು ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 26-06-2024 ರಂದು ಬೆಳಿಗ್ಗೆ 11.00 ರಿಂದ 07-07-2024- ರಾತ್ರಿ 11.59 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ದಿನಾಂಕ 09-07-2024 ರ ಸಂಜೆ 6.00 ರೊಳಗೆ ಶುಲ್ಕವನ್ನು ಪಾವತಿಸಬಹುದು. ಆನ್ ಲೈನ್ ನಲ್ಲಿ ನೋಂದಾಯಿಸಲು ದಿನಾಂಕಗಳನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ ಅಂತ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ