ಬೆಂಗಳೂರು : ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಅಲ್ಲದೇ ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ನೀರಿನ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಸೂಚನೆ ನೀಡಿದ್ದಾರೆ.
ತತ್ಸಂಬಂಧ ನಿಯಮ ರೂಪಿಸಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಅವರು, ಬಾಟಲಿಗಳ ಮೂಲಕ ಕುಡಿಯುವ ನೀರನ್ನು ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಯ ಜವಾಬ್ದಾರಿಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ಕನಿಷ್ಠ ದರ ನೀಡಿ ಮರಳಿ ಖರೀದಿಸುವಂತೆ ನಿಯಮ ರೂಪಿಸಿದಲ್ಲಿ ಪ್ಲಾಸ್ಟಿಕ್ ಬಾಟಲಿಯ ಹಾವಳಿ ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಣ್ಣಲ್ಲಿ ಮಣ್ಣಾಗದ, ನೀರಿನಲ್ಲಿ ಕರಗದ, ಸುಟ್ಟರೆ ಪ್ರಾಣವಾಯುವಿಗೆ ವಿಷಕಾರಿ ಅಂಶಗಳನ್ನು ಸೇರ್ಪಡೆ ಮಾಡುವ ಪ್ಲಾಸ್ಟಿಕ್ ಪ್ರಕೃತಿ ಪರಿಸರಕ್ಕೆ ಅಷ್ಟೇ ಅಲ್ಲದೆ ಜನ, ಜಾನುವಾರಗಳ ಆರೋಗ್ಯಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ, ಬಳಕೆಯನ್ನು ನಿಷೇಧಿಸಿದ್ದು, ರಾಜ್ಯ ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ರೂಪಿಸಿದೆ. ಆದಾಗ್ಯೂ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಪರಿಸರಕ್ಕೆ ಹಾನಿ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೊದಲಿಗೆ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದು ಪರಿಸರ ಹಾಳು ಮಾಡುತ್ತಿರುವ, ಖನಿಜಯುಕ್ತ ನೀರಿನ ಬಾಟಲಿ (ಮಿನರಲ್ ವಾಟರ್ ಬಾಟಲ್ಸ್)ಗೆ ಕಡಿವಾಣ ಹಾಕಬೇಕಾಗಿದೆ. ಹೊಸ ನೀರಿನ ಬಾಟಲಿ ಖರೀದಿಸಲು ಬರುವ ಗ್ರಾಹಕರಿಂದ ಬಾಟಲಿ ನೀರು ಮಾರುವ ಚಿಲ್ಲರೆ ಮಳಿಗೆಗಳು ಯಾವುದೇ ಕಂಪನಿಯ ನೀರಿನ ಬಾಟಲಿ ನೀಡಿದರೂ ಅದಕ್ಕೆ ಕನಿಷ್ಠ ಬೆಲೆ ನೀಡಿ/ ಅಷ್ಟು ದರ ಕಡಿತ ಮಾಡಿ ಹೊಸ ಬಾಟಲಿ ಮಾರಾಟ ಮಾಡುವಂತೆ ಮತ್ತು ಈ ರೀತಿ ಸಂಗ್ರಹಿಸಲಾದ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.
ಉತ್ಪಾದಕರ ವಿಸ್ತರಿತ ಜವಾಬ್ದಾರಿ (ಇ.ಪಿ.ಆರ್. – Extended Producer Responsibility)ಯಂತೆ ಯಾವುದೇ ಉತ್ಪನ್ನವನ್ನು ತಯಾರಿಸುವವರು, ತಮ್ಮ ಉತ್ಪನ್ನಗಳಿಂದ ಪರಿಸರ ಮೇಲಾಗುವ ಪರಿಣಾಮಗಳನ್ನು ಉತ್ಪನ್ನವು ಗ್ರಾಹಕರ ಕೈಸೇರಿದ ನಂತರವೂ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಮರು ಖರೀದಿ ಮಾಡಿ ವಿಲೇವಾರಿ ಮಾಡಿದಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸಬಹುದು ಎಂಬುದು ಈಶ್ವರ ಖಂಡ್ರೆ ಅವರ ಅಭಿಮತವಾಗಿದೆ.
ನಾಳೆ ಬಿಡದಿ ಹಾಫ್ ಮ್ಯಾರಥಾನ್: ನಮ್ಮ ಮೆಟ್ರೋ ರೈಲು ಸಂಚಾರ ಮುಂಜಾನೆ 4ರಿಂದಲೇ ಆರಂಭ | Namma Metro
ನಾಗ್ಪುರ ಹಿಂಸಾಚಾರ: ಮತ್ತೆ 14 ಮಂದಿ ಬಂಧನ, ಬಂಧಿತರ ಸಂಖ್ಯೆ 105ಕ್ಕೆ ಏರಿಕೆ, 3 ಹೊಸ FIR ದಾಖಲು | Nagpur violence