ಬೆಳಗಾವಿ: ದೇಶದ ಐತಿಹಾಸಿಕ ದಿನವಾದ ನೆನ್ನೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಇಡೀ ದೇಶದ ಕೋಟ್ಯಾಂತರ ಜನರು ಕಣ್ತುಂಬಿಕೊಂಡು ಸಂತಸ ಪಟ್ಟರು ಆದರೆ ಬೆಳಗಾವಿ ಜಿಲ್ಲೆಯಲ್ಲಿ ಎರಡು ಗುಂಪುಗಳ ಮಧ್ಯ ಕಲ್ಲುತೂರಾಟ ನಡೆದಿದ್ದು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದಕ್ಕೆ ಕಲ್ಲು ತೂರಾಟ ನಡೆದಿರುವ ಘಟನೆ ಜರುಗಿದೆ.
ಜಿಲ್ಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಪರಸ್ಪರ ಕಲ್ಲು ತೂರಾಟ ನಡೆದಿದೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಮತ್ತೊಂದು ಗುಂಪಿನವರು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಿಂದ ಕೆಲಹೊತ್ತು ಆತಂಕ ಉಂಟಾಗಿತ್ತು. ಬೆಳಗಾವಿಯ ಪಾಟೀಲ ಗಲ್ಲಿಯಲ್ಲಿ ಘಟನೆ ನಡೆದಿದೆ. ಜೈಶ್ರೀರಾಮ ಎಂದು ಘೋಷಣೆ ಕೂಗುತ್ತಾ ಒಂದು ಯುವಕರ ಗುಂಪು ಹೊರಟಿತ್ತು. ಈ ಯುವಕರ ಗುಂಪಿನ ಮೇಲೆ ಮತ್ತೊಂದು ಗುಂಪಿನ ಯುವಕರಿಂದ ಕಲ್ಲು ತೂರಾಟ ನಡೆಸಲಾಗಿದೆ.
ಆಗ ಪ್ರತಿಯಾಗಿ ಕಲ್ಲು ತೂರಿದ ಯುವಕರು. ತಕ್ಷಣವೇ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರಿಂದ ಲಘು ಲಾಠಿ ಚಾರ್ಜ್ ಮಾಡಲಾಗಿದೆ. ಬಳಿಕ ತಕ್ಷಣವೇ ಸ್ಥಳದಿಂದ ಕಾಲ್ಕಿತ್ತು ಎರಡು ಗುಂಪಿನ ಯುವಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರ ಭೇಟಿ ನೀಡಿ, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.