ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆಗಳು ಮತ್ತು ಅಮೆರಿಕ-ಇರಾನ್ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿಂದು ಐತಿಹಾಸಿಕ ಏರಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ (Sensex) 2700 ಅಂಕಗಳಿಗೂ ಹೆಚ್ಚು ಏರಿಕೆ ಕಂಡು ಗೂಳಿ ಅಬ್ಬರಿಸಿದ್ದರೆ, ಇತ್ತ ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ (Nifty) 24,000 ಅಂಕಗಳ ಸನಿಹಕ್ಕೆ ತಲುಪಿದೆ.
ಇರಾನ್ ಮತ್ತು ಅಮೆರಿಕ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆಯೇ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಇದು ಭಾರತೀಯ ಮಾರುಕಟ್ಟೆಯ ಮೇಲೂ ಧನಾತ್ಮಕ ಪರಿಣಾಮ ಬೀರಿದೆ. ಹಾರ್ಮುಜ್ ಜಲಸಂಧಿ ಮುಕ್ತವಾದ ಬೆನ್ನಲ್ಲೇ ತೈಲ ಬೆಲೆ ಕುಸಿದಿರುವುದು ಇಂಧನ ಮತ್ತು ಸರಕು ಸಾಗಣೆ ವಲಯದ ಕಂಪನಿಗಳ ಷೇರುಗಳ ಬೆಲೆ ಏರಿಕೆಗೆ ಕಾರಣವಾಗಿದೆ.
ಆರ್‌ಬಿಐ ಪಾಲಿಸಿಯ ಆಶಾವಾದ: ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿಯಲ್ಲಿ ಪೂರಕ ನಿಲುವು ತಳೆಯಬಹುದು ಎಂಬ ನಿರೀಕ್ಷೆ ಮತ್ತು ರೂಪಾಯಿ ಮೌಲ್ಯ ಚೇತರಿಸಿಕೊಂಡಿರುವುದು ಮಾರುಕಟ್ಟೆಗೆ ಬಲ ನೀಡಿದೆ.
ಎಚ್‌ಡಿಎಫ್‌ಸಿ (HDFC), ರಿಲಯನ್ಸ್ (Reliance) ಮತ್ತು ಐಸಿಐಸಿಐ (ICICI) ಬ್ಯಾಂಕ್‌ಗಳಂತಹ ಬೃಹತ್ ಕಂಪನಿಗಳ ಷೇರುಗಳು ಭಾರಿ ಲಾಭ ಗಳಿಸಿವೆ. ಐಟಿ ವಲಯದ ಷೇರುಗಳೂ ಕೂಡ ಉತ್ತಮ ಏರಿಕೆ ಕಂಡಿವೆ.








