ಬೆಂಗಳೂರು : ನೋಂದಣಿ ಸಮಯದಲ್ಲಿನ ಅಕ್ರಮಗಳ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಶೀಘ್ರವೇ ಪೌತಿ ಪಹಣಿ ಅದಾಲತ್ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಕುರಿತು ಕಂದಾಯ ಸಚಿವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, ನೋಂದಣಿ ಸಮಯದಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸಲು ಪಹಣಿಗಳೊಂದಿಗೆ ಆಧಾರ್ ಜೋಡಣೆ ಕಾರ್ಯ (ನನ್ನ ಆಸ್ತಿ ಅಭಿಯಾನ) ಆರಂಭಿಸಲಾಗಿದೆ. ಪ್ರಾಯೋಗಿಕವಾಗಿ ಸಂಗ್ರಹಿಸಿದ 19 ಲಕ್ಷ ಪಹಣಿಗಳಲ್ಲಿ 6 ಲಕ್ಷ ಪಹಣಿಗಳು ಮೃತರ ಹೆಸರಿನಲ್ಲೇ ಇರುವುದು ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿನ 1.87 ಕೋಟಿ ಪಹಣಿ ಸಂಗ್ರಹಿಸಿದರೆ ಪೌತಿ ಪಹಣಿಗಳ ಸಂಖ್ಯೆಯ ನಿಖರ ಮಾಹಿತಿ ದೊರೆಯುತ್ತದೆ. ಮೃತರ ಹೆಸರಿನಲ್ಲಿ ಪಹಣಿ ಇದ್ದರೆ ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಲೋಕ್ ಅದಾಲತ್ ಮೂಲಕ ಇಂತಹ ಪಹಣಿಗಳನ್ನು ಅದರ ವಾರಸುದಾರರಿಗೆ ವರ್ಗಾಯಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದ್ದಾರೆ.