ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾನೂನಿನಲ್ಲಿರುವ ಎಲ್ಲ ಅಧಿಕಾರ ಹಾಗೂ ಹಣಕಾಸನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಕುರಿತಂತೆ ನಿಯಮ 330 ರಡಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಮಂಡಿಸಿದ ಸೂಚನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸ್ಥಳೀಯ ಸಂಸ್ಥೆಗಳನ್ನು ಸ್ವಯಂ ಆಡಳಿತ ಸಂಸ್ಥೆಗಳನ್ನಾಗಿ ರೂಪಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ . ಗ್ರಾಮಾಂತರ ಪ್ರದೇಶದ ಜನರ ಜೀವನಮಟ್ಟ ಸುಧಾರಿಸಲು ಹಾಗೂ ಮೂಲ ಸೌಕರ್ಯ ಒದಗಿಸಲು ಆಯಾ ಗ್ರಾಮ ಪಂಚಾಯತಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆ, 15 ನೇ ಹಣಕಾಸು ಯೋಜನೆ, ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಬಾಪುಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ಸುಮಾರು 72 ಸೇವೆಗಳನ್ನು ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಗಾಮ ಪಂಚಾಯತಿ ಗಳ ಕಾರ್ಯನಿರ್ವಹಣೆ ಯನ್ನು ಪ್ರೋತ್ಸಾಹಿಸುವ ಸಲುವಾಗಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತಿಗಳಿಗೆ 5 ಲಕ್ಷ ಪ್ರೋತ್ಸಾಹ ಧನವನ್ನು ಗಾಂಧಿ ಗ್ರಾಮ ಪ್ರೋತ್ಸಾಹ ಯೋಜನೆಯಡಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲ್ ಗೊಳಿಸಲಾಗಿದ್ದು, ಇದರ ಸಮಯವನ್ನು 6 ಗಂಟೆಯಿಂದ 8 ಗಂಟೆಗಳಿಗೆ ಹೆಚ್ಚಿಸಲಾಗಿದೆ. ನರೇಗಾ ಯೋಜನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರಾಜ್ಯದ ಆಯ್ದ 4000 ಗ್ರಾಮ ಪಂಚಾಯಿತಿಗಳಲ್ಲಿ ‘ ಕೂಸಿನ ಮನೆ’ ಶಿಶು ಪಾಲನಾ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಕೇಂದ್ರ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಪ್ರತಿ ಗ್ರಾಮ ಪಂಚಾಯಿತಿಗೆ 15 ಲಕ್ಷ , ತಾಲ್ಲೂಕು ಪಂಚಾಯತಿಗೆ 11 ಲಕ್ಷ, ಜಿಲ್ಲಾ ಪಂಚಾಯತಿಗೆ 1.5 ಕೋಟಿ ಸರಾಸರಿ ಅನದಾನವನ್ನು ನೀಡಲಾಗುತ್ತಿದೆ. ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಗ್ರಾಮ ಪಂಚಾಯತಿಗಳಿಗೆ ವಾರ್ಷಿಕವಾಗಿ 20 ಲಕ್ಷ ಶಾಸನಬದ್ಧ ಅನುದಾನ ನೀಡಲಾಗುತ್ತಿದೆ ಎಂದರು.
ಪ್ರಸ್ತುತ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಹಣಕಾಸು ಪರಿಸ್ಥಿತಿಯನ್ನು ಅವಲೋಕಿಸಲು ಸಿ.ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ 5 ನೇ ಹಣಕಾಸು ಆಯೋಗವನ್ನು ಸ್ಥಾಪಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿ , ಕಟ್ಟಡ ಮತ್ತು ನೀರಿನ ಮೇಲೆ ತೆರಿಗೆ ವಿಧಿಸಿ ಸಂಪನ್ಮೂಲ ಕ್ರೋಡಿಕರಿಸಲು ಆಯಾ ಗ್ರಾಮ ಪಂಚಾಯಿತಿಗಳಿಗೆ ಅವಕಾಶ ನೀಡಲಾಗಿದೆ ಎಂದರು.
‘ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಹೀಗಿದೆ ‘ರಾಜ್ಯ ಸರ್ಕಾರ’ದಿಂದ ಮಾನ್ಯತೆ ಪಡೆದ ‘ಖಾಸಗಿ ಆಸ್ಪತ್ರೆ’ಗಳ ಪಟ್ಟಿ