ಬೆಂಗಳೂರು: ಒಳ ಮೀಸಲಾತಿ ಜಾರಿಗೊಳಿಸಲು ಇಚ್ಛೆ ಇರದ ರಾಜ್ಯದ ಕಾಂಗ್ರೆಸ್ ಸರ್ಕಾರ ನಾಟಕ ಮಾಡುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಟೀಕಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲೇ ಮೀಸಲಾತಿಯ ಅನ್ಯಾಯ ಸರಿಪಡಿಸಲಾಗುವುದು ಎಂದು ಚುನಾವಣೆ ಸಮಯದಲ್ಲಿ ಭರವಸೆ ನೀಡಿದ್ದರು.
ಅಧಿಕಾರಕ್ಕೆ ಬಂದ ನಂತರ ವರಸೆ ಬದಲಾಯಿಸಿದರು. ಅಧಿಕಾರಕ್ಕೆ ಬಂದ ಎಂಟು ತಿಂಗಳ ಬಳಿಕ, ಲೋಕಸಭಾ ಚುನಾವಣೆಯಲ್ಲಿ ಸಮುದಾಯಗಳ ದಾರಿ ತಪ್ಪಿಸಲು 341ನೇ ವಿಧಿ ತಿದ್ದುಪಡಿಗೆ ಕೇಂದ್ರಕ್ಕೆ ಶಿಫಾರಸು ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ 2012ರಲ್ಲಿ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ನಂತರ 2020ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತಿದ್ದುಪಡಿ ಅಗತ್ಯವೇ ಇಲ್ಲ. ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಹೆಚ್ಚುವರಿ ಸೇರಿಸಲು ಅಥವಾ ಇರುವ ಜಾತಿಗಳನ್ನು ತೆಗೆಯಲು ಅವಕಾಶ ಇಲ್ಲ ಎಂದು ನ್ಯಾಯಮೂರ್ತಿ ಅರುಣ್‍ಕುಮಾರ್ ಮಿಶ್ರಾ ತೀರ್ಪಿನಲ್ಲಿ ಹೇಳಿದ್ದರು. ಹಾಗಿದ್ದರೂ, ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಆಡಳಿತ ಇದ್ದಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಹಲವು ಜಾತಿಗಳನ್ನು ಸೇರ್ಪಡೆ ಮಾಡಿದ ಪರಿಣಾಮ 101 ಜಾತಿಗಳಾಗಿವೆ. ಪರಿಶಿಷ್ಟ ಪಂಗಡದಲ್ಲಿ 56 ಜಾತಿಗಳಿವೆ. ಹಾಗಾಗಿ, ದಲಿತರಿಗೆ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ. ಮುಖ್ಯಮಂತ್ರಿಯಾಗಿದ್ದ ಅವರದೇ ಪಕ್ಷದ ಎಸ್.ಎಂ.ಕೃಷ್ಣ ಅವರು ಸದಾಶಿವ ಆಯೋಗ ರಚಿಸಿದ್ದರು.
ಆದರೆ, ಅನುದಾನ ನೀಡಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸೌಲಭ್ಯ ಕಲ್ಪಿಸಿದ್ದರು. 2012ರಲ್ಲಿ ಆಯೋಗ ವರದಿ ನೀಡಿದ್ದರೂ 2013–18ರವರೆಗೆ ಅಧಿಕಾರ ನಡೆಸಿದ ಸಿದ್ದರಾಮಯ್ಯ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಈಗ ಮತ್ತೆ ನಾಟಕ ಆರಂಭಿಸಿದ್ದಾರೆ ಎಂದರು.