ಬೆಂಗಳೂರು: ಮಾರ್ಚ್.5ರ ಇಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ರಾಜ್ಯ ಮಟ್ಟದ 5ನೇ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಭಾಗಿಯಾಗುವಂತ ನೌಕರರಿಗೆ ಅನುಕೂಲವಾಗುವಂತೆ ಮಾರ್ಚ್.5ರ ಇಂದು ಮತ್ತು ನಾಳೆ, ಎರಡು ದಿನ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು,ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ./ಎಸ್.ಟಿ. ನೌಕರರ ಸಮನ್ವಯ ಸಮಿತಿಯ ವತಿಯಿಂದ ದಿನಾಂಕ: 05.03.2024 ರಂದು ಬೆಂಗಳೂರಿನ ವಸಂತ ನಗರದಲ್ಲಿರುವ ಡಾ|| ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಟ್ಟದ 5ನೇ ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ/ಎಸ್.ಟಿ, ನೌಕರರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದಿದ್ದಾರೆ.
ಈ ಸಮಾವೇಶದಲ್ಲಿ ಭಾಗವಹಿಸುವ ಬೆಂಗಳೂರು ನಗರ ಜಿಲ್ಲೆಯ ಸಂಘದ ಸದಸ್ಯರು ಅಧಿಕಾರಿ/ನೌಕರರಿಗೆ ದಿನಾಂಕ: 05.03.2024 ರಂದು ಒಂದು ದಿನ ಮಾತ್ರ ಹಾಗೂ ರಾಜ್ಯದ ಇತರ ಜಿಲ್ಲೆಗಳ ಸಂಘದ ಸದಸ್ಯ ಅಧಿಕಾರಿ/ನೌಕರರಿಗೆ ಪ್ರಯಾಣ ದಿನಗಳೂ ಸೇರಿದಂತೆ ದಿನಾಂಕ: 05.03 2024 ಮತ್ತು 06,03,2024 ಗಳಂದು ಎರಡು ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ ಭಾಗವಹಿಸಿದ ಬಗೆ, ಸಮ್ಮೇಳನದ ಸಂಘಟಕರಿಂದ ಹಾಜರಾತಿ ಪ್ರಮಾಣ ಪತ್ರವನ್ನು ಪಡೆಯುವ ಷರತ್ತಿಗೊಳಪಟ್ಟು ರಜೆಯನ್ನು ಮಂಜೂರು ಮಾಡಲು ಸಕ್ಷಮ ಪ್ರಾಧಿಕಾರ ಈ ರಜೆಯನ್ನು ಮಂಜೂರು ಮಾಡತಕ್ಕದ್ದು ಎಂದು ಸೂಚಿಸಿದ್ದಾರೆ.