ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸುವುದು ಹಾಗೂ ಇನ್ನು ಮುಂದೆ ಸದರಿ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿಗಳ ಹೂಡಿಕೆಗಳನ್ನು ಮಾಡಬಾರದೆಂಬ ಸುತ್ತೋಲೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವುದಾಗಿ ರಾಜ್ಯ ಸರ್ಕಾರದ ತಿಳಿಸಿದೆ. ಈ ಮೂಲಕ ತಾತ್ಕಾಲಿಕವಾಗಿ ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ವ್ಯವಹಾರಗಳ ಸ್ಥಗಿತದ ಆದೇಶಕ್ಕೆ ತಡೆ ನೀಡಿದೆ.
ಇಂದು ರಾಜ್ಯ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸುವುದು ಮತ್ತು ಠೇವಣಿಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆಯುವಂತೆ ಸೂಚಿಸಲಾಗಿತ್ತು ಎಂದಿದೆ.
ಎಸ್.ಬಿ.ಐ ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಿನೋದ್ ಜೈಸ್ವಾಲ್ ರವರು 15 ದಿನಗಳ ಕಾಲಾವಕಾಶವನ್ನು ಕೋರಿ ಮನವಿ ಪತ್ರವನ್ನು ಸಲ್ಲಿಸಿರುತ್ತಾರೆ. ಮುಂದುವರದು ದಿನಾಂಕ 16.08.24 ರಂದು ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿಯವರು (ಆರ್ಥಿಕ ಇಲಾಖೆ ) ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ , ಕೆ.ಎಸ್.ಪಿ.ಸಿ.ಬಿ. ಸಂಸ್ಥೆಯು ನಿಶ್ಚಿತ ಠೇವಣಿಯಲ್ಲಿ ಹೂಡಿರುವ ಹಣವನ್ನು ಮರುಪಾವತಿಸುವ ವಿಷಯವನ್ನು ಇತ್ಯರ್ಥಗೊಳಿಸಲು ತಮ್ಮ ಮನವಿಯನ್ನು ಸಲ್ಲಿಸಿರುತ್ತಾರೆ ಎಂದು ಹೇಳಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ದೀಪಕ್ ಕುಮಾರ್ ಶ್ರೀವಾತ್ಸವ ರವರು ರವರು 15 ದಿನಗಳ ಕಾಲಾವಕಾಶವನ್ನು ಕೋರಿ ಮನವಿ ಪತ್ರವನ್ನು ಸಲ್ಲಿಸಿರುತ್ತಾರೆ ಹಾಗು ದಿನಾಂಕ 16.08.24 ರಂದು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಮತ್ತು ಹಿರಿಯ ಅಧಿಕಾರಿಗಳನ್ನು ಬೇಟಿ ಮಾಡಿ ಸಕಾರಾತ್ಮಕವಾಗಿ ಸ್ಪಂದಿಸಿ, ಕೆ.ಐ.ಎ.ಡಿ.ಬಿ. ಸಂಸ್ಥೆಯ ನಿಶ್ಚಿತ ಠೇವಣಿಯನ್ನು ಮರುಪಾವತಿಸುವ ಕುರಿತು ಸಮಯಾವಕಾಶವನ್ನು ಕೋರಿರುತ್ತಾರೆ ಎಂದು ತಿಳಿಸಿದೆ.
ಎಸ್.ಬಿ.ಐ ಮತ್ತು ಪಿ.ಎನ್.ಬಿ ಬ್ಯಾಂಕ್ ಗಳ ಕೋರಿಕೆಯ ಹಿನ್ನೆಲೆಯಲ್ಲಿ ದಿನಾಂಕ: 12.08.2024 ರಂದು ಹೊರಡಿಸಿರುವ ಸುತ್ತೋಲೆಯನ್ನು 15 ದಿನಗಳವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಬೆಂಗಳೂರು ಜನತೆ ಗಮನಕ್ಕೆ: ಆ.17ರ ನಾಳೆ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ ಆರಂಭ | South Western Railway