ಬೆಂಗಳೂರು: ರಾಜ್ಯ ಸರ್ಕಾರದಿಂದ ಕೆಲ ದಿನಗಳ ಹಿಂದೆ ರಾಜ್ಯದ ಎಲ್ಲಾ ಸಹಕಾರ ಸಂಘ, ಬ್ಯಾಂಕ್ ಗಳ ಚುನಾವಣೆಯನ್ನು ಮುಂದೂಡಿಕೆ ಮಾಡಿ ಆದೇಶಿಸಿತ್ತು. ಆ ನಂತ್ರ ಮತ್ತೆ ಆ ಆದೇಶವನ್ನು ರದ್ದುಗೊಳಿಸಿತ್ತು. ಇದೀಗ ಮತ್ತೆ ಸಹಕಾರ ಸಂಘ, ಬ್ಯಾಂಕ್ ಚುನಾವಣೆ ಮುಂದೂಡಿಕೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಹಕಾರ ಸಂಘ, ಸಹಕಾರ ಬ್ಯಾಂಕ್ ಗಳ ಚುನಾವಣೆ ಮುಂದೂಡಿಕೆ ಮಾಡಿ ಆದೇಶಿಸಿದೆ.
ಮಾರ್ಚ್.13ರಂದು ಮುಕ್ತಾಯಗೊಳ್ಳಲಿರುವ ಸಹಕಾರಿ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳ ಅವಧಿ ಮುಂದುವರಿಸಿ ಸರ್ಕಾರ ಆದೇಶಿಸಿತ್ತು. ಬಳಿಕ ಕೋರ್ಟ್ ನಿರ್ದೇಶನದ ಅನ್ವಯ ಆದೇಶ ಹಿಂಪಡೆದಿತ್ತು. ಮಾರ್ಚ್ ನಿಂದ ಜೂನ್.6ರ ಅವಧಿಯಲ್ಲಿ ಆಡಳಿತ ಮಂಡಳಿ ಪದಾವಧಿ ಮುಕ್ತಾಯಗೊಳ್ಳಲಿದ್ದು, ಜೂನ್.6ರವರೆಗೆ ಚುನಾವಣೆ ಮುಂದೂಡಿ ಅವಧಿ ಮುಂದುವರಿಸಲಾಗಿತ್ತು.
ಈಗಾಗಲೇ ಆಡಳಿತ ಮಂಡಳಿ ಚುನಾವಣೆ ನಡೆದು, ಪದಾಧಿಕಾರಿಗಳ ಚುನಾವಣೆ ಬಾಕಿ ಇದ್ದಲ್ಲಿ ಅಂತಹ ಪ್ರಕರಣಗಳಿಗೆ ಈ ಆದೇಶ ಅನ್ವಯ ಆಗುವುದಿಲ್ಲ. ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಲ್ಲಿ, ಅಂತಹ ಸಹಕಾರ ಸಂಘಗಳ ಚುನಾವಣೆ ಪ್ರಕ್ರಿಯೆ ಯಥಾಸ್ಥಿತಿಯಲ್ಲಿ ನಿಂತು ಹೋಗತಕಕ್ಕದ್ದು ಮತ್ತು ಜೂನ್.6ರ ನಂತ್ರ ಮುಂದುವರೆಸತಕ್ಕದ್ದು ಎಂದಿದೆ.
ಆಡಳಿತಾಧಿಕಾರಿ, ವಿಶೇಷಾಧಿಕಾರಿ ನೇಮಿಸಿರುವ ಪ್ರಕರಣಗಳಲ್ಲಿ ಆಡಳಿತಾಧಿಕಾರಿ, ವಿಶೇಷಾಧಿಕಾರಿಗಳೇ ಮುಂದುವರೆಯತಕ್ಕದ್ದು. ನ್ಯಾಯಾಲಯದ ಆದೇಶದಂತೆ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದಲ್ಲಿ, ಪ್ರಾರಂಭಗೊಳ್ಳಬೇಕಿದ್ದಲ್ಲಿ, ಈ ಆದೇಶವನ್ನು ನ್ಯಾಯಾಲಯದ ಗಮನಕ್ಕೆ ತಂದು ಮುಂದುವರಿಯಬೇಕು ಎಂಬುದಾಗಿ ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.