ರಾಯಚೂರು : ರಾಜ್ಯದಲ್ಲಿ ತಾಯಿ ಮಗುವಿನ ಮರಣ ಪ್ರಮಾಣವನ್ನ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ರಾಯಚೂರಿನಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಅಭಿಯಾನದ ಮೂಲಕ ಪ್ರತಿ ತಿಂಗಳು 9 ಮತ್ತು 24 ರಂದು ಎರಡು ಬಾರಿ ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಯಲಿದ್ದು, ರಾಜ್ಯಾದ್ಯಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಅಭಿಯಾನ ನಡೆಯಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯದಲ್ಲಿ ತಾಯಿ ಮುಗುವಿನ ಮರಣ ಪ್ರಮಾಣ ಲಕ್ಷಕ್ಕೆ 64 ಇದೆ. ಇದನ್ನ ಶೂನ್ಯಕ್ಕೆ ತರಬೇಕು. ಆದರೆ ಕೆಲವು ವೈದ್ಯಕೀಯ ಕಾರಣಗಳಿಂದ ಸಾವುಗಳು ಸಂಭವಿಸುತ್ತವೆ. ಸಾವಾಗದಂತೆ ತಡೆಯಲು ಸಾಧ್ಯವಿರುವ ಪ್ರಕರಣಗಳ ವಿಚಾರದಲ್ಲಿ ನಾವು ಹೆಚ್ಚು ಒತ್ತು ನೀಡಿ ತಾಯಿ ಮಗುವಿನ ಮರಣ ಪ್ರಮಾಣವನ್ನ ಕಡಿಮೆಗೊಳಿಸಬಹುದಾಗಿದೆ.ಈ ಗುರಿಯೊಂದಿಗೆ ಮಾತೃತ್ವ ಸುರಕ್ಷಾ ಅಭಿಯಾನವನ್ನ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಕೈಗೊಳ್ಳಲು ಮುಂದಾಗಿದ್ದೇವೆ.. ರಾಯಚೂರಿನಲ್ಲಿ ತಾಯಿ ಮಗುವಿನ ಮರಣ ಪ್ರಮಾಣ ಹೆಚ್ಚಿರುವುದರಿಂದ ಇಲ್ಲಿಂದಲೇ ಅಭಿಯಾನ ಆರಂಭಿಸುತ್ತಿರುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು. ದಿನದ 24 ಗಂಟೆಯೂ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ತಜ್ಞ ವೈದ್ಯರ ಸೇವೆ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ ಒಬ್ಬರು ಸ್ತ್ರೀರೋಗ ತಜ್ಞರ ಬದಲಿಗೆ ಇಬ್ಬರು ತಜ್ಞ ವೈದ್ಯರನ್ನ ನೇಮಿಸಲು ಕ್ರಮ ವಹಿಸಲಾಗುತ್ತಿದೆ. ಹೀಗಾಗಿ ರಾತ್ರಿ ವೇಳೆಯಲ್ಲಿಯೂ ಗರ್ಭಿಣಿಯರಿಗೆ ತಜ್ಞ ವೈದ್ಯರ ಆರೋಗ್ಯ ಸೇವೆ ಲಭ್ಯವಾಗಲಿದೆ. ಯಾರೇ ವೈದ್ಯೆರು ತಮ್ಮ ಕರ್ತವ್ಯ ಸ್ಥಳದಲ್ಲಿರದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇನ್ನು ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಗರ್ಭಿಣಿಯರು ANC ನೊಂದಣಿ ಮಾಡಿಸಿಕೊಂಡು ಉಚಿತ ತಪಾಸಣೆ ಹಾಗೂ ಔಷಧಿಗಳನ್ನ ಪಡೆಯಬಹುದು. ತಪಾಸಣೆ ವೇಳೆ ಗರ್ಭಿಣಿಯರ ಸ್ಕ್ಯಾನಿಂಗ್ ಸೇರಿದಂತೆ ಇಸಿಜಿ ಟೆಸ್ಟಿಂಗ್ ಕೂಡ ಮಾಡಿಸಲಾಗುವುದು. ಅಪಾಯದಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆಯ ಸಲಹೆಯ ಜೊತೆಗೆ ಗರ್ಭಿಣಿಯರ ಆರೋಗ್ಯ ಸ್ಥಿತಿ ಕುರಿತು ಆಗಾಗ ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.
ರಾಯಚೂರಿನಲ್ಲಿ ನಡೆದ ಮಾತೃತ್ವ ಸುರಕ್ಷಾ ಅಭಿಯಾನದಲ್ಲಿ 700 ಕ್ಕೂ ಹೆಚ್ಚು ಗರ್ಭಿಣಿಯರು ಪಾಲ್ಗೊಂಡು ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿಕೊಂಡರು. ಮುನ್ನೆಚ್ಚರಿಕೆ, ಪೌಷ್ಟಿಕ ಆಹಾರ ಸೇವನೆ ಕುರಿತಂತೆ ತಜ್ಞ ವೈದ್ಯರು ಗರ್ಭಿಣಿಯರಿಗೆ ಸೂಕ್ತ ಸಲಹೆ ಸೂಚನೆ ನೀಡಿದರು. ರಕ್ತದೊತ್ತಡ, ಮಧುಮೇಹ ಸೇರಿ ಅನೇಕ ಸಮಸ್ಯೆಗಳನ್ನ ಹೊಂದಿರುವ ಗರ್ಭಿಣಿಯರನ್ನ ಆರಂಭದಲ್ಲೇ ಪತ್ತೆ ಹಚ್ಚುವಲ್ಲಿ ಆರೋಗ್ಯ ಶಿಬಿರ ಹೆಚ್ಚು ಸಹಕಾರಿಯಾಗಿದ್ದು, ಗರ್ಭಿಣಿಯರ ಅಪಾಯದ ಸ್ಥಿತಿ ತಲುಪದಂತೆ ಮುನ್ನೆಚ್ಚಿರಿಕೆ ವಹಿಸುವ ನಿಟ್ಟಿನಲ್ಲಿ ಈ ರೀತಿಯ ಶಿಬಿರಗಳು ಹೆಚ್ವು ಅನುಕೂಲಕರವಾಗಿವೆ.
ರಾಯಚೂರಿಗೆ 8 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮಾನ್ವಿಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರಾಯಚೂರು ನಗರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅಲ್ಲದೇ ಜಿಲ್ಲೆಯ ಒಂದು ತಾಲೂಕಿಗೆ 200 ಹಾಸಿಗೆ ಸಬ್ ಡಿವಿಷನ್ ಆಸ್ಪತ್ರೆಗೆ ಯೋಜನೆ ರೂಪಿಸಿದ್ದೇವೆ ಎಂದರು.