ಬೆಂಗಳೂರು : ಈ ಮೊದಲೇ ಹೇಳಿದಂತೆ ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವ ಪಡಿತರರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಅದರಂತೆ ರಾಜ್ಯ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ ಒಟ್ಟು 4.9 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡ ಅನರ್ಹ ಪಡಿತರದಾರರ ಪತ್ತೆ ಕಾರ್ಯದಲ್ಲಿ ಕಳೆದ ಕೆಲವು ವಾರಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ.
ಇದುವರಿಗೂ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸುವ ಸಂಖ್ಯೆ 4.9 ಲಕ್ಷಕ್ಕೆ ಏರಿಕೆಯಾಗಿದೆ. ಈ ಅಭಿಯಾನದಲ್ಲಿ ಬಿಪಿಎಲ್ ಕಾರ್ಡ್ ಕಳೆದುಕೊಂಡ ಅನರ್ಹರಿಗೆ ಸರ್ಕಾರ ಎಪಿಎಲ್ ಕಾರ್ಡ್‌ಗಳನ್ನು ನೀಡಲು ಮುಂದಾಗಿದೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದು ಪಡಿತರ ಯೋಜನೆಯ ಲಾಭ ಪಡೆದುಕೊಳ್ಳುತ್ತಿರುವ ಫಲಾನುಭವಿಗಳಿಗೆ ದಂಡ ವಿಧಿಸುವುದಕ್ಕೂ ಆಹಾರ ಇಲಾಖೆ ಚಿಂತನೆ ನಡೆಸುತ್ತಿದೆ. ಈ ಸಂಬಂಧ ದಂಡದ ನಿಯಮಗಳ ರೂಪುರೇಷೆಗಳನ್ನು ಕೂಡ ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








