ರಾಜ್ಯ ಸರಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಗೆ ಧಾರವಾಡ ಜಿಲ್ಲೆಯಲ್ಲಿ 16 ಆಸ್ಪತ್ರೆಗಳು ಸೇರ್ಪಡೆಯಾಗಿದ್ದು, ಹುಬ್ಬಳ್ಳಿ ಹಾಗೂ ಧಾರವಾಡದ ತಲಾ ಒಂದು ಆಸ್ಪತ್ರೆಗಳು ಯೋಜನೆಗೆ ಒಳಪಡಲು ಒಪ್ಪಿಗೆ ಸೂಚಿಸಿದ್ದು, ಸರ್ಕಾರದೊಂದಿಗೆ ಎಂಓಯು ಹಂತದಲ್ಲಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪ್ರಮುಖ ನರ್ಸಿಂಗ್ ಆಸ್ಪತ್ರೆಗಳು ಈ ಯೋಜನೆಗೆ ಸ್ವಯಂ ಪ್ರೇರಣೆಯಿಂದ ಒಳಪಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮನವಿ ಮಾಡಿದರು.
ಅವರು (ಡಿ.10) ದಿನ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಕೆಪಿಎಂಇ ಕಾನೂನುನಡಿ ನೋಂದಾಯಿತರಾಗಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪ್ರಮುಖ ಆಸ್ಪತ್ರೆಗಳ ವೈದ್ಯರ ಹಾಗೂ ಮುಖ್ಯಸ್ಥರ, ಪ್ರತಿನಿಧಿಗಳ ಸಭೆ ಜರುಗಿಸಿ, ಮಾತನಾಡಿದರು.
ಜಿಲ್ಲೆಯಲ್ಲಿರುವ ಸುಮಾರು 23 ಲಕ್ಷ ಜನರಿಗೆ ಸರ್ಕಾರದ ವಿವಿಧ ಯೋಜನೆ, ಕಾಮಗಾರಿ, ಕಾರ್ಯಕ್ರಮಗಳ ಸೇವೆ ನೀಡಲು ವಿವಿಧ ಹಂತದಲ್ಲಿ ಅಂದಾಜು 22 ರಿಂದ 23 ಸಾವಿರ ಸರ್ಕಾರಿ ನೌಕರರಿದ್ದಾರೆ. ಅವರ ಮಾನಸಿಕ, ದೈಹಿಕ ಆರೋಗ್ಯವು ಉತ್ತಮ ಆಡಳಿತ ದೃಷ್ಠಿಯಿಂದ ಮುಖ್ಯವಾಗಿದೆ. ಸರ್ಕಾರವು ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಆರೋಗ್ಯ ಯೋಜನೆಯ ಲಾಭವು ನಮ್ಮ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ತಲುಪಿಸಿ, ಯಶಸ್ವಿಗೊಳಿಸಲು ಖಾಸಗಿ ಆಸ್ಪತ್ರೆಗಳ ಸಹಕಾರವು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಯೋಜನೆಯ ಮಹತ್ವ ಮತ್ತು ಖಾಸಗಿ ಆಸ್ಪತ್ರೆಗಳ ಸಕ್ರಿಯ ಪಾಲ್ಗೋಳ್ಳುವಿಕೆ ಕುರಿತು ಈಗಾಗಲೇ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳೊಂದಿಗೆ, ಅವಳಿನಗರದ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಡಿಸಿ ಕಚೇರಿಯಲ್ಲಿ ಸಭೆ ಜರುಗಿಸಿ, ಯೋಜನೆಗೆ ನೋಂದಣಿಯಾಗಲು ತಿಳಿಸಲಾಗಿದೆ. ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು, ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಪ್ರಮುಖ ಆಸ್ಪತ್ರೆಗಳಿಗೆ ಭೇಟಿ ನೀಡಿ, ಯೋಜನೆಯ ಕುರಿತು ತಿಳುವಳಿಕೆ ನೀಡಿದ್ದಾರೆ ಎಂದು ಅವರು ಹೇಳಿದರು.
ಆದರೂ ಸಹ, ವಿಶೇಷವಾಗಿ ಧಾರವಾಡದ ಕೆಲವು ಪ್ರಮುಖ ಆಸ್ಪತ್ರೆಗಳು ಯೋಜನೆಗೆ ಒಳಪಡಲು ವಿಳಂಬ ಮಾಡುತ್ತೀವೆ. ಇದು ಸರಿಯಾದ ಕ್ರಮವಲ್ಲ. ಪ್ರತಿನಿತ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳಿಗೆ ಆರೋಗ್ಯ ಸುರಕ್ಷತೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಯೋಜನೆಯ ನೋಂದಣಿ ಆಗುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮನವಿ ಮಾಡಿದರು.
ಆರೋಗ್ಯ ಸಂಜೀವಿನಿಗೆ ನೋಂದಣಿ ಆಗಿರುವ ಆಸ್ಪತ್ರೆಗಳು: ರಾಜ್ಯ ಸರಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಗೆ ಹುಬ್ಬಳ್ಳಿಯ ಅಶೋಕ ಆಸ್ಪತ್ರೆ, ಹುಬ್ಬಳ್ಳಿ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ, ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ, ಸಂಜೀವಿನಿ ಸ್ಪೆಶಾಲಿಟಿ ಆಸ್ಪತ್ರೆ, ಶಿವಕೃಪಾ ಆಸ್ಪತ್ರೆ, ಸುಚಿರಾಯು ಆಸ್ಪತ್ರೆ, ಮಾನಸಾ ಮೆಂಟಲ್ ಹೆಲ್ತ್ ಇನ್ಸ್ಟಿಟ್ಯೂಟ್, ವ್ಹಿ.ಕೇರ್ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ, ತತ್ತ್ವದರ್ಶಿ ಆಸ್ಪತ್ರೆ, ಜಯಪ್ರಿಯಾ ಆಸ್ಪತ್ರೆ, ಎಚ್.ಸಿ.ಜಿ. ಎನ್ಎಮ್ಆರ್ ಕ್ಯೂರ್ ಸೆಂಟರ್ ಆಪ್ ಅಂಕೊಲೊಜಿ, ಶ್ರೀ ಬಾಲಾಜಿ ಇನಸ್ಟಿಟ್ಯೂಟ್ ಆಪ್ ನ್ಯೂರೊ ಸೈನ್ಸ್ ಆಸ್ಪತ್ರೆ, ವಿವೇಕಾನಂದ ಜನರಲ್ ಆಸ್ಪತ್ರೆಗಳು, ಸೆಕ್ಯೂರ್ ಆಸ್ಪತ್ರೆ, ವಿಹಾನ್ ಆಸ್ಪತ್ರೆಗಳು ಈಗಾಗಲೇ ನೋಂದಣಿ ಆಗಿವೆ ಎಂದು ಹೇಳಿದ ಜಿಲ್ಲಾಧಿಕಾರಿಗಳು, ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ನೋಂದಣಿಗೆ ಒಪ್ಪಿರುವ ಆಸ್ಪತ್ರೆಗಳು: ಧಾರವಾಡದ ಯುನಿಟಿ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿಗೆ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದ್ದು, ಸರ್ಕಾರಕ್ಕೆ ಎಂಓಯು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಸರ್ಕಾರಿ ನೌಕರರ ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯ ಸುರಕ್ಷತೆಯ ದೃಷ್ಠಿಯಿಂದ ಧಾರವಾಡದ ಎಸ್.ಡಿ.ಎಂ.ಆಸ್ಪತ್ರೆ, ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ, ತಾವರಗೇರಿ ನರ್ಸಿಂಗ್ ಹೋಮ್, ವಿಠ್ಠಲ ಚಿಕ್ಕಮಕ್ಕಳ (ದೇಶಪಾಂಡೆ) ಆಸ್ಪತ್ರೆ, ಡಾ.ಎಸ್.ಆರ್.ರಾಮನಗೌಡರ ಆಸ್ಪತ್ರೆ, ಶ್ರವ್ಯಾ ಡಾ.ಎಸ್.ಆರ್.ಜಂಬಗಿ ಆಸ್ಪತ್ರೆ, ಎಸ್.ಡಿ.ಎಂನಾರಾಯಣ ಹೃದಯಾಲಯ ಆಸ್ಪತ್ರೆ, ಚಿರಾಯು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ವಾಸನ್ ಐ ಕೇರ್ ಆಸ್ಪತ್ರೆ, ಎಸ್.ಡಿ.ಎಂ.ಡೆಂಟಲ್ ಆಸ್ಪತ್ರೆ, ಯುನಿಟಿ ಆಸ್ಪತ್ರೆ, ನಿರ್ಮಲಾ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ನವಸ್ಪಂದನ ಆಸ್ಪತ್ರೆ, ಶ್ರೇಯಾ ಆಸ್ಪತ್ರೆ, ಜರ್ಮನ ಆಸ್ಪತ್ರೆ, ಮತ್ತು ಹುಬ್ಬಳ್ಳಿಯ ಶೂಶ್ರುತಾ ಆಸ್ಪತ್ರೆ, ಸಿಟಿ ಕ್ಲಿನಿಕ್, ರೆಡಾನ್ ಕ್ಯಾನ್ಸರ್ ಆಸ್ಪತ್ರೆ, ಎಚ್.ಸಿ.ಜಿ.ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಅವಳಿನಗರದ ಪ್ರಮುಖ ಆಸ್ಪತ್ರೆಗಳು ಯೋಜನೆಗೆ ನೋಂದಣಿ ಆಗಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಮ್. ಹೊನಕೇರಿ ಅವರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಸಭೆಯಲ್ಲಿ ವಿವರಿಸಿದರು. ಮತ್ತು ನೋಂದಣಿ ಅಗತ್ಯತೆಯನ್ನು ಆಸ್ಪತ್ರೆಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪಾ ಗಾಬಿ, ಜಿಲ್ಲಾ ಕೆಪಿಎಮ್ಇ ಸಮಿತಿ ಸದಸ್ಯ ದೇವರಾಜಯ್ಯ ರಾಯಚೂರು ಅವರು ಇದ್ದರು.
ಸಭೆಯಲ್ಲಿ ಹುಬ್ಬಳ್ಳಿ ಧಾರವಾಡ ಪ್ರಮುಖ ಆಸ್ಪತ್ರೆಗಳ ವೈದ್ಯರು, ಮುಖ್ಯಸ್ಥರು, ಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.








