ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಉಪಚುನಾವಣೆಯು ಫೆಬ್ರವರಿ 16ರಂದು ನಡೆಯಲಿದೆ. ಅದೇ ದಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಬಜೆಟ್ ಮಂಡಿಸುವ ದಿನಾಂಕವನ್ನು ಮುಂದೂಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಬೇಕೆಂದು ಬಿಜೆಪಿ ನಿಯೋಗವು ಒತ್ತಾಯಿಸಿದೆ.
ಈ ಕುರಿತು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ರುದ್ರಯ್ಯ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಹಾಗೂ ಮುಖಂಡರ ನಿಯೋಗವು ಇಂದು ಶೇಷಾದ್ರಿ ರಸ್ತೆ ಬಳಿ ಇರುವ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ದೂರು ಸಲ್ಲಿಸಿದೆ.
ಫೆ.16ರಂದೇ ರಾಜ್ಯ ಬಜೆಟ್ ಮಂಡನೆಯು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಆಗಲಿದೆ. ಅದೇ ದಿನ ಬಜೆಟ್ ಮಂಡಿಸಿದರೆ ಮತದಾರರ ಮೇಲೆ ಪ್ರಭಾವದ ಸಾಧ್ಯತೆಯೂ ಇದೆ. ಹೀಗಿದ್ದೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಅಧಿವೇಶನವನ್ನು ಪ್ರಕಟಿಸಿದ್ದಾರೆ ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.ಈಗಾಗಲೇ ಇದನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಇದರ ಕುರಿತು ಒಂದೆರಡು ದಿನಗಳಲ್ಲಿ ತಿಳಿಸುವುದಾಗಿ ಚುನಾವಣಾ ಆಯೋಗದ ಅಧಿಕಾರಿಗಳೂ ತಿಳಿಸಿದ್ದಾರೆ ಎಂದರು.