ಬೆಂಗಳೂರು : ಎಸ್ ಎಸ್ ಎಲ್ ಸಿ ಫೇಲ್ ಆಗಿ ಮನೆಯಲ್ಲಿ ಇದ್ದಂತಹ ವಿದ್ಯಾರ್ಥಿಯ ಮೇಲೆ ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆಗೈದ ಘಟನೆ ಬೆಂಗಳೂರಿನ YMRAC ಸರ್ಕಲ್ ಬಳಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು 17 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಮಂಜುನಾಥ್ ಅಪ್ಪ ಅಮ್ಮನ ಕಳೆದುಕೊಂಡು ಅಬ್ಬಿಗೆರೆಯಲ್ಲಿ ಚಿಕ್ಕಪ್ಪನ ಆಶ್ರಯದಲ್ಲಿದ್ದ.ಈ ವರ್ಷವಷ್ಟೇ SSLC ಪರೀಕ್ಷೆ ಬರೆದು ಫೇಲ್ ಆಗಿದ್ದ. ಆದರೆ ಮೊನ್ನೆ ರಾತ್ರಿ ಮನೆಯಿಂದ ಹೊರ ಹೋಗಿದ್ದ ಮಂಜುನಾಥ್ ನನ್ನ ಭೀಕರವಾಗಿ ಕೊಲೆ ಮಾಡಲಾಗಿದ್ದು, ಹತ್ಯೆ ಮಾಡಿದ ಪಾಪಿಗಳು ಎಸ್ಕೇಪ್ ಆಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮಂಜುನಾಥ್ ಡ್ರಿಂಕ್ಸ್ ಮಾಡಿದ್ದು ಅಲ್ಲದೆ ಗಾಂಜಾ ಸೇವನೆ ಕೂಡ ಮಾಡಿ ಬೀದಿಯಲ್ಲಿ ನಿಂತಿದ್ದ. ಈ ವೇಳೆ ಪೋಷಕರು ಹೋಗಿ ಮಂಜುನಾಥ್ ನನ್ನ ಮನೆಗೆ ಕರ್ಕೊಂಡ ಬಂದಿದ್ರು. ಆದರೆ ಮತ್ತೆ ಮಂಜುನಾಥ್ ಮಧ್ಯರಾತ್ರಿ ಎದ್ದು ಹೊರಗಡೆ ಹೋಗಿದ್ದವನು ವಾಪಾಸ್ ಬಂದಿಲ್ಲ. ಇದರಿಂದ ಸಹಜವಾಗಿ ಮನೆಯವರು ಗಾಬರಿಗೆ ಒಳಗಾಗಿದ್ದಾರೆ.ಈ ವೇಳೆ ಪೋಷಕರು ಮಗನನ್ನ ಹುಡುಕಲು ಶುರುಮಾಡಿದಾಗ ನಿನ್ನೆ ಸಂಜೆ YMRAC ಸರ್ಕಲ್ ಬಳಿಯ ಖಾಲಿ ಜಾಗದಲ್ಲಿ ಮಂಜುನಾಥ್ ಮೃತದೇಹ ಪತ್ತೆಯಾಗಿತ್ತು.
ಇನ್ನು ಮಂಜುನಾಥ್ ತಲೆ ಮೇಲೆ ದುಷ್ಕರ್ಮಿಗಳು ರಾಡ್ ನಿಂದ ಹೊಡೆದು ಹತ್ಯೆ ಮಾಡಿರೋದು ಗೊತ್ತಾಗಿದೆ. ಆದರೇ ಮಂಜುನಾಥ್ ಹುಡುಗಿಯೊಬ್ಬಳನ್ನ ಪ್ರೀತಿಸಿದ್ದು, ಇದೇ ವಿಚಾರಕ್ಕೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಇನ್ನೊಂದು ಕಡೆ ಗಾಂಜಾ ಮತ್ತಿನಲ್ಲಿ ಯುವಕರ ಮಧ್ಯೆ ಕಿರಿಕ್ ನಡೆದು ಮಂಜುನಾಥ್ ಕೊಲೆ ಆಗಿದೆ ಎನ್ನಲಾಗ್ತಿದೆ. ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಇದೀಗ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.