ಬಳ್ಳಾರಿ : ಶ್ರೀರಾಮುಲು ಸಾರಿಗೆ ಸಚಿವರಾಗಿ ಸಂಡೂರಿಗೆ ಒಂದೇ ಒಂದು ಬಸ್ಟಾಂಡ್ ಕಟ್ಟಿಸಲಿಲ್ಲ. ಒಂದೇ ಒಂದು ಬಸ್ ಕೂಡ ಬಿಡಲಿಲ್ಲ. ಮೊನ್ನೆ ನಮ್ಮ ಸರ್ಕಾರ ಬಂದ ಮೇಲೆ 200 ಹೊಸ ಬಸ್ ಗಳನ್ನು ಬಿಟ್ಟಿದ್ದೇವೆ. ಶ್ರೀರಾಮುಲು ಆರೋಗ್ಯ ಸಚಿವರಾಗಿ ಸಂಡೂರಿಗೆ ಒಂದೇ ಒಂದು ಆಸ್ಪತ್ರೆ ಕೊಡಲಿಲ್ಲ. ನಾವು 100 ಬೆಡ್ ಗಳ ಆಸ್ಪತ್ರೆ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಸಂಡೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮತನಾಡಿದರು. ಅನ್ನಪೂರ್ಣ ತುಕಾರಾಮ್ ಅವರು ಸಂಡೂರು ಕ್ಷೇತ್ರದಿಂದ ಗೆಲ್ಲುವುದು ನೂರಕ್ಕೆ ನೂರು ಸತ್ಯ. ಟಿಕೆಟ್ ಘೋಷಣೆಗೂ ಮೊದಲೇ ನಾವು ಸಂಡೂರು ಕ್ಷೇತ್ರದಲ್ಲಿ ನಡೆಸಿದ ಎಲ್ಲಾ ಜನ ಸಮೀಕ್ಷೆಗಳಲ್ಲೂ ಅನ್ನಪೂರ್ಣ ಅವರ ಪರವಾಗಿಯೇ ಇತ್ತು. ಹೀಗಾಗಿ ಇವರನ್ನೇ ಅಭ್ಯರ್ಥಿಯಾಗಿ ಘೋಷಿಸಿದೆವು.
ಲೋಕಸಭಾ ಚುನಾವಣೆಯಲ್ಲೂ ಈ.ತುಕಾರಾಮ್ ಅವರ ಪರವಾಗಿಯೇ ಎಲ್ಲಾ ಸಮೀಕ್ಷಾ ವರದಿಗಳು ಇದ್ದಿದ್ದರಿಂದ ಹೈಕಮಾಂಡ್ ತುಕಾರಾಮ್ ಅವರ ಹೆಸರನ್ನೇ ಘೋಷಿಸಿತು.
ಸಮೀಕ್ಷೆಯಂತೆ ಲೋಕಸಭಾ ಚುನಾವಣೆಯಲ್ಲಿ ಈ.ತುಕಾರಾಮ್ ಗೆದ್ದರು. ಈಗ ಸಂಡೂರು ಉಪ ಚುನಾವಣೆಯಲ್ಲೂ ಅನ್ನಪೂರ್ಣ ತುಕಾರಾಮ್ ಅವರೇ ಗೆಲ್ತಾರೆ.ನಾನು ಮೂರು ದಿನಗಳಿಂದ ಇಡೀ ಸಂಡೂರು ಕ್ಷೇತ್ರ ದಲ್ಲಿ ಪ್ರವಾಸ ಮಾಡಿದ್ದೇನೆ. ಒಟ್ಟು 18 ಬೃಹತ್ ಬಹಿರಂಗ ಸಭೆಗಳನ್ನು ನಡೆಸಿದ್ದೇವೆ. ಒಟ್ಟು ಒಂದೂವರೆ ಲಕ್ಷದಷ್ಟು ಜನ ಈ 18 ಬಹಿರಂಗ ಸಭೆಗಳಿಗೆ ಬಂದಿದ್ದಾರೆ. ಅವರೆಲ್ಲರ ಉತ್ಸಾಹ ಕೂಡ ಅನ್ನಪೂರ್ಣಮ್ಮ ಅವರ ಪರವಾಗಿಯೇ ಇದೆ. ಆದ್ದರಿಂದ ನಾನು ಹೇಳ್ತೀನಿ ಇಲ್ಲಿ ಅನ್ನಪೂರ್ಣಮ್ಮ ಅವರು ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದರು.
ನಾವು ಜನರ ಕಲ್ಯಾಣಕ್ಕೆ ಕೆಲಸ ಮಾಡಿ, ಜನರ ಆರ್ಥಿಕ ಶಕ್ತಿ ಹೆಚ್ವಿಸುವ ಯೋಜನೆಗಳನ್ನು-ಗ್ಯಾರಂಟಿಗಳನ್ನು ಜಾರಿ ಮಾಡಿ ಓಟು ಕೇಳುತ್ತಿದ್ದೇವೆ. ನಾವು ಕೆಲಸ ಮಾಡಿ ಕೂಲಿ ಕೇಳ್ತಾ ಇದೀವಿ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಸಂಡೂರಿನ ಅಭಿವೃದ್ಧಿ ಕಡೆ ಗಮನವನ್ನೇ ಕೊಡಲಿಲ್ಲ. ಭ್ರಷ್ಟಾಚಾರ ಮಾಡಿ ಹಣ ಲೂಟಿ ಮಾಡಿಕೊಂಡು ಮನೆ ಸೇರಿದರು.
ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಜೆ ಬಂದು, ಮೋದಿ ಪ್ರಧಾನಿಯಾಗಿ 11 ವರ್ಷ ಆಯ್ತು. ಆದರೂ ಬೆಲೆ ಏರಿಕೆಗೆ ಬ್ರೇಕ್ ಹಾಕಲಿಲ್ಲ. ಮೋದಿ ಭಾಷಣದಲ್ಲಿ ಹೇಳಿದ ಅಚ್ಛೆ ದಿನ ಭಾರತೀಯರ ಪಾಲಿಗೆ ಇವತ್ತಿನವರೆಗೂ ಬರಲಿಲ್ಲ. ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ರಸಗೊಬ್ಬರ, ಅಕ್ಕಿ ಬೇಳೆ, ಎಣ್ಣೆ ಸೇರಿ ಯಾವುದರ ಬೆಲೆಯೂ ಕಡಿಮೆ ಆಗಲಿಲ್ಲ. ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀನಿ ಎಂದು ಭಾರತೀಯರನ್ನು ನಂಬಿಸಿ ಬಕ್ರಾ ಮಾಡಿ ಅಧಿಕಾರಕ್ಕೆ ಬಂದು ಯಾವ ಬೆಲೆಗಳನ್ನೂ ಇಳಿಸಲಿಲ್ಕ.
ಬದಲಿಗೆ ಭಾರತೀಯರನ್ನು, ಭಾರತವನ್ನು ದೊಡ್ಡ ಸಾಲಗಾರ ಮಾಡಿಟ್ಟರು. ಮೋದಿ ಪ್ರಧಾನಿ ಆಗುವ ಮೊದಲು 1947 ರಿಂದ 2014 ರ ವರೆಗೂ ಭಾರತದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ. ಆದರೆ ಮೋದಿ ಒಬ್ಬರೇ 2014 ರಿಂದ 2024 ರ ವರೆಗೂ 135 ಲಕ್ಷ ಕೋಟಿ ಸಾಲ ಮಾಡಿ ಭಾರತದ ಸಾಲವನ್ನು 184 ಲಕ್ಷ ಕೋಟಿಗೆ ಏರಿಸಿದ್ದಾರೆ. ಇದೇ ಮೋದಿಯ ಪಾಲಿನ ಅಚ್ಛೆ ದಿನ್ ಆದರೆ, ಇವು ಭಾರತೀಯರ ಪಾಲಿಗೆ ಕೆಟ್ಟ ದಿನಗಳಾಗಿವೆ.
ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಎಂದು ಭಾಷಣ ಮಾಡಿದ ಮೋದಿ, ರೈತರ ಆದಾಯ ಮೂರು ಪಟ್ಟು ಆಗುವಂತೆ ಮಾಡಿದರು. ಕಪ್ಪು ಹಣ ತರಲಿಲ್ಲ. ಭಾರತೀಯರ ಅಕೌಂಟಿಗೆ ತಲಾ 15 ಲಕ್ಷ ಹಾಕ್ತೀನಿ ಎಂದು ಭಾಷಣ ಮಾಡಿದ್ದ ಮೋದಿಯವರ ಮಾತು ಇನ್ನೂ ಭಾಷಣದೊಳಗೇ ಉಳಿದಿದೆ ಹೊರತು ಒಬ್ಬ ಭಾರತೀಯನ ಅಕೌಂಟಿಗೂ ಹಣ ಬರಲಿಲ್ಲ ಎಂದರು.ರಾಜ್ಯದಲ್ಲಿ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 165 ಭರವಸೆಗಳಲ್ಲಿ 158 ನ್ನು ಈಡೇರಿಸಿದ್ದೇನೆ. ಹತ್ತು ಹಲವು ಭಾಗ್ಯಗಳನ್ನು ಕೊಟ್ಟಿದ್ದೇನೆ ಎಂದರು.
ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ಸೇವೆ. ನಮ್ಮ ಪ್ರತೀ ಕೆಲಸಗಳೂ ನಿಮ್ಮ ಮನೆ ಬಾಗಿಲಿವೆ ತಲುಪಿವೆ. ಆದರೆ ಬಿಜೆಪಿಯವರ ಸುಳ್ಳುಗಳು ನಿಮ್ಮ ಮನೆ ಬಾಗಿಲಿಗೆ ಬಂದಿವೆಯೇ ಹೊರತು, ನಿಮ್ಮ ಬದುಕಿಗೆ ಭರವಸೆಯಾಗುವ ಒಂದೇ ಒಂದು ಬಿಜೆಪಿಯ ಯೋಜನೆಗಳೂ ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ. ಯಾವ ಮುಖ ಹೊತ್ತುಕೊಂಡು ಬಿಜೆಪಿಯವರು ನಿಮ್ಮ ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದರು.