ಶಿವಮೊಗ್ಗ: ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿಯ ಸಿಗಂದೂರು ಜಾತ್ರೆಗೆ ಶ್ರೀ ಸಿಗಂದೂರು ಕ್ಷೇತ್ರ ಸಜ್ಜಾಗಿದೆ. ಮೊದಲ ಬಾರಿಗೆ ತೂಗು ಸೇತುವೆ ಬಳಿಕ ಮಕರ ಸಂಕ್ರಾಂತಿಯ ಜಾತ್ರೆ ಇದಾಗಿದ್ದು, ಭಕ್ತ ಸಾಗರವೇ ಹರಿದು ಬರುವ ನಿರೀಕ್ಷೆಯಲ್ಲಿ ಆಡಳಿತ ಮಂಡಲಿ ಇದೆ.
ಈ ಕುರಿತಂತೆ ಶ್ರೀ ಕ್ಷೇತ್ರದ ಸಿಗಂದೂರು ಚೌಡೇಶ್ವರಿ ದೇವಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹೆಚ್.ಆರ್ ರವಿ ಕುಮಾರ್ ಮಾಹಿತಿ ನೀಡಿದ್ದು, ಜನವರಿ 14 ಮತ್ತು 15ರಂದು ಶ್ರೀ ಕ್ಷೇತ್ರ ಸಿಗಂದೂರಲ್ಲಿ ಸಿಗಂದೂರು ಜಾತ್ರಾ ಮಹೋತ್ಸವ ನೆರವೇರಲಿದೆ. ಜಾತ್ರೆಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಪೂಜೆ, ಉತ್ಸವ, ಹೋಮ-ಹವನಗಳು ಜರುಗಲಿವೆ. ಇದಕ್ಕಾಗಿ ಸಿಗಂದೂರು ಕ್ಷೇತ್ರದ ಅಂತಿಮ ತಯಾರಿ ಪೂರ್ಣಗೊಂಡಿದೆ ಎಂಬುದು ತಿಳಿಸಿದ್ದಾರೆ.
ಜ.14ರಂದು ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?
ಜನವರಿ.14ರ ಬುಧವಾರದಂದು ಶ್ರೀ ಕ್ಷೇತ್ರ ಸಿಗಂದೂರಲ್ಲಿ ಮುಂಜಾನೆ 4ರಿಂದಲೇ ಮಹಾಭಿಷೇಕ, ಹೂವಿನ ಮತ್ತು ಆಭರಣದ ಅಲಂಕಾರ ನೆರವೇರಲಿದೆ. ಜೊತೆಗೆ 5 ಗಂಟೆಗೆ ಗೋ ಪೂಜೆ, 6ಕ್ಕೆ ಗುರು ಪೂಜೆ, 7ಕ್ಕೆ ದೇವಿ ಪಾರಾಯಣ, 8ಕ್ಕೆ ರಥ ಪೂಜೆ ನಡೆಯಲಿದೆ. ಆ ಬಳಿಕ ರಥ ಹಾಗೂ ಪಲ್ಲಕ್ಕಿಯು ಮೂಲ ಸ್ಥಾನಕ್ಕೆ ಹೊರಡಲಿದೆ. 8.30ಕ್ಕೆ ಚಂಡಿಕಾ ಹೋಮ ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಜ್ಯೋತಿ ದೇವಾಲಯ ಪ್ರವೇಶಿಸಲಿದೆ. 12.30 ಚಂಡಿಕಾ ಹೋಮ, ಪೂರ್ಣಾಹುತಿ ನೆರವೇರಲಿದೆ ಎಂದಿದ್ದಾರೆ.
ಇನ್ನೂ ಮಧ್ಯಾಹ್ನ 3 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಸಿಗಂದೂರಲ್ಲಿ ಆರಂಭಗೊಳ್ಳಲಿದೆ. ಸಂಜೆ 5 ಗಂಟೆಗೆ ಗುರುಪೂಜೆ, 6ಕ್ಕೆ ಗಂಗಾರತಿ ನೆರವೇರಿದ ಬಳಿಕ ರಾತ್ರಿ 7 ಗಂಟೆಗೆ ಶಿವದೂತ ಗುಳಿಗ ನಾಟಕ ಪ್ರದರ್ಶನ ಪ್ರದರ್ಶನಗೊಳ್ಳಲಿದೆ. ರಾತ್ರಿ 9.30ಕ್ಕೆ ಡಿಕೆಡಿ ಮತ್ತು ಇಂಡಿಯಾಸ್ ಗಾಟ್ ಟ್ಯಾಲೆಂಟ್ ಹಾಗೂ ಸರಿಗಮಪ, ಎದೆ ತುಂಬಿ ಹಾಡುವೆನು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಲಾವಿದರಿಂದ ಗಾನ- ಮಯೂರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಜನವರಿ.14ರಂದೇ ಮೂಲ ದೇವಸ್ಥಾನದಲ್ಲಿ ಬೆಳಗ್ಗೆ 5.30ರಿಂದ ಪುಣ್ಯಾಹ ಶುದ್ಧಿ, 6ಕ್ಕೆ ನವಚಂಡಿಕಾ ಹೋಮ, 8.30ಕ್ಕೆ ಹೋಮ ಪೂರ್ಣಾಹುತಿ, 9ಕ್ಕೆ ಮಹಾಭಿಷೇಕ, ಹೂವಿನ ಮತ್ತು ಆಭರಣ ಅಲಂಕಾರ, ಮಹಾಪೂಜೆ, 10.30ಕ್ಕೆ ಕುಂಭ ಲಗ್ನದಲ್ಲಿ ಪಲ್ಲಕ್ಕಿ ಉತ್ಸವ, ಜ್ಯೋತಿ ಮೆರವಣಿಗೆ ಆರಂಭಗೊಳ್ಳಲಿದೆ ಎಂಬುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಜನವರಿ.14ರಂದು ಮಧ್ಯಾಹ್ನ ಸಚಿವರು, ಶಾಸಕರಿಂದ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಜನವರಿ.14ರಂದು ಜಾತ್ರೋತ್ಸವಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಚಾಲನೆ ನೀಡಲಿದ್ದಾರೆ. ಧರ್ಮ ಜ್ಯೋತಿಗೆ ಸಾಗರ ಹಾಗೂ ಹೊಸನಗರ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರ ಸಿಗಂದೂರಿನ ಅನುವಂಶಿಕ ಧರ್ಮದರ್ಶಿ ಡಾ.ಎಸ್ ರಾಮಪ್ಪ ವಹಿಸಲಿದ್ದಾರೆ. ಸಾಗರಗನಜಡ್ಡು ಶ್ರೀ ಕ್ಷೇತ್ರ ಕಾರ್ತೀಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತ ಶ್ರೀಗಳು ಇರಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಯಲಹಂಕ ವಲಯದ ಅಬಕಾರಿ ನಿರೀಕ್ಷಕರಾದಂತ ಚಂದ್ರಮೂರ್ತಿ ಪಿ ಅವರು ಭಾಗಿಯಾಗಲಿದ್ದಾರೆ ಎಂದು ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹೆಚ್.ಆರ್ ರವಿ ಕುಮಾರ್ ತಿಳಿಸಿದ್ದಾರೆ.
ಜನವರಿ.15ರಂದು ಮಕರ ಸಂಕ್ರಾಂತಿಯಂದು ಸಿಗಂದೂರಲ್ಲಿ ಕಾರ್ಯಕ್ರಮಗಳೇನು?
ಜ.15ರಂದು ಮಕರ ಸಂಕ್ರಾಂತಿಯಂದು ಮುಂಜಾನೆ ಸಿಗಂದೂರು ಚೌಡೇಶ್ವರಿ ದೇವಿಗೆ ಮಹಾಭಿಷೇಕ ನೆರವೇರಲಿದೆ. ಆ ಬಳಿಕ ಹೂವಿನ ಹಾಗೂ ಆಭರಣಗಳಿಂದ ಅಲಂಕಾರ, ಮಹಾಪೂಜೆ ನಡೆಯಲಿದೆ. ಬೆಳಗ್ಗೆ 6ಕ್ಕೆ ಗುರು ಪೂಜೆ, 7ಕ್ಕೆ ದೇವಿ ಪಾರಾಯಣ, 8ಕ್ಕೆ ನವ ಚಂಡಿಕಾ ಹೋಮ, ಮಧ್ಯಾಹ್ನ 3ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿವೆ. ಸಂಜೆ 5ಕ್ಕೆ ಶ್ರೀ ಚಕ್ರ ಸಹಿಜ ದುರ್ಗಾ ದೀಪಪೂಜೆ, ರಂಗಪೂಜೆ, ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ಕ್ಕೆ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯ ಪಾವಂಜೆ ಮೇಳದಿಂದ ಶ್ರೀ ದೇವಿ ಲಲಿತೋಪಾಖ್ಯಾನ ಯಕ್ಷಗಾನ ಪ್ರದರ್ಶನವಿರಲಿದೆ ಎಂದು ತಿಳಿಸಿದ್ದಾರೆ.
ಜ.15ರಂದು ಸಂಜೆ 6ಕ್ಕೆ ವಿವಿಧ ಸಾಧಕರಿಗೆ ಸನ್ಮಾನ
ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ.15ರಂದು ಸಂಜೆ.6 ಗಂಟೆಗೆ ನಡೆಯಲಿರುವಂತ ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ, ರೈತರಿಗೆ, ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಅನುವಂಶಿಕ ಧರ್ಮದರ್ಶಿ ಡಾ.ಎಸ್ ರಾಮಪ್ಪ ಸನ್ಮಾನಿಸಿ, ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ.
ತೂಗು ಸೇತುವೆಯ ಬಳಿಕ ಮೊದಲ ಜಾತ್ರೆಗೆ ಭಕ್ತ ಸಾಗರ ಹರಿದು ಬರುವ ನಿರೀಕ್ಷೆ
ಶ್ರೀ ಸಿಗಂದೂರು ಚೌಡೇಶ್ವರಿ ಜಾತ್ರೆಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಯಾವುದೇ ರೀತಿಯ ಕೊರತೆ ಆಗದಂತೆ ಎಲ್ಲರ ಸಹಕಾರದೊಂದಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಬರುವ ಭಕ್ತರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವ್ಯವಸ್ಥಿತವಾಗಿ ಸಹಕರಿಸಬೇಕು. ಈಗಾಗಲೇ ಜಾತ್ರೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ಧತೆಗಳು ಸಂಪನ್ನಗೊಂಡಿದೆ ಎಂಬುದಾಗಿ ಶ್ರೀ ಕ್ಷೇತ್ರದ ಅನುವಂಶಿಕ ಧರ್ಮದರ್ಶಿ ಡಾ.ಎಸ್ ರಾಮಪ್ಪ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಸಿಗಂದೂರಿನ ಸೇತುವೆ ಲೋಕಾರ್ಪಣೆಗೊಂಡ ಮೇಲೆ ಸಂಪರ್ಕ ಸೇತುವೆಯ ಮೂಲಕ ಭಕ್ತ ಸಾಗರವೇ ಜಾತ್ರೆಗೆ ಆಗಮಿಸುವ ನಿರೀಕ್ಷೆಯಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿಂದಾಗಿ ದೇವಿಯ ದರ್ಶನಕ್ಕೂ ಕೂಡ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಹಲವು ಸಮಿತಿಗಳ ಮೂಲಕ ಸಭೆ ನಡೆಸಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬುದಾಗಿ ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹೆಚ್.ಆರ್ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.. ಸಂಪಾದಕರು…








