ಬೆಂಗಳೂರು: ಆಗಸ್ಟ್ 20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025 ಆರಂಭವಾಗುತ್ತಿದೆ. ಅಲ್ಲದೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶ ಕೂಡ ನೀಡಲಾಗುತ್ತಿದೆ. ಈ ಮೂಲಕ ಬಿಬಿಎಂಪಿ ಚುನಾವಣೆಗೆ ಭರ್ಜರಿ ತಯಾರಿಯನ್ನು ನಡೆಸಲಾಗುತ್ತಿದೆ.
ಈ ಕುರಿತಂತೆ ಬಿಬಿಎಂಪಿ ಮುಖ್ಯ ತುಷಾರ್ ಗಿರಿ ನಾಥ್ ಮಾಹಿತಿ ನೀಡಿದ್ದು, ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ: 23/2024-ERS (Vol.IV), ದಿನಾಂಕ: 07.08.2024ರ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಬೆಂಗಳೂರು ವ್ಯಾಪ್ತಿಯಲ್ಲಿ ಅರ್ಹತಾ ದಿನಾಂಕ: 01.01.2025ನ್ನು ಉಲ್ಲೇಖಿಸಿ ದಿನಾಂಕ: 06.01.2025 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಡುವ ಸಂಬಂಧ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ ವೇಳಾ ಪಟ್ಟಿಯನ್ನು ನಿಗಧಿಪಡಿಸಲಾಗಿದೆ ಎಂದಿದ್ದಾರೆ.
ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ವಿಶೇಷ ಅಭಿಯಾನ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ. ಸಾರ್ವಜನಿಕರು ವಿಶೇಷ ಅಭಿಯಾನಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದುಹಾಕುವಿಕೆಗಳಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮುಖ್ಯ ಆಯುಕ್ತರು ಆದ ತುಷಾರ್ ಗಿರಿ ನಾಥ್ ರವರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025 ವೇಳಾಪಟ್ಟಿಯ ವಿವರ:
20ನೇ ಆಗಸ್ಟ್ 2024 (ಮಂಗಳವಾರ) ರಿಂದ 18ನೇ ಅಕ್ಟೋಬರ್ 2024 (ಶುಕ್ರವಾರ) ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ/ಮರು ಹೊಂದಾಣಿಕೆ ಸೇರಿದಂತೆ ಮತದಾರರ ಪಟ್ಟಿ/ಮತದಾರರ ಗುರುತಿನ ಚೀಟಿಗಳಲ್ಲಿನ ಲೋಪದೋಷಗಳನ್ನು ತೆಗೆದುಹಾಕುವುದು. ಅಗತ್ಯವಿರುವ ಕಡೆ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಖಾತ್ರಿಪಡಿಸುವುದು. ವಿಭಾಗ/ಭಾಗಗಳ ಮರುಹೊಂದಾಣಿಕೆ ಹಾಗೂ ಪ್ರಸ್ತಾಪಿತ ವಿಭಾಗ/ಭಾಗಗಳ ಮತಗಟ್ಟೆಗಳ ಸ್ಥಳವನ್ನು ಅಂತಿಮಗೊಳಿಸುವಿಕೆ ಮತ್ತು ಮತಗಟ್ಟೆಗಳ ಪಟ್ಟಿಗಳಿಗೆ ಅನುಮೋದನೆ ಪಡೆದುಕೊಳ್ಳುವುದು. ನ್ಯೂನತೆಗಳ ಗುರುತಿಸುವಿಕೆ ಮತ್ತು ಅಂತಹ ನ್ಯೂನತೆಗಳನ್ನು ನಿವಾರಿಸಲು ಕಾರ್ಯತಂತ್ರ ಮತ್ತು ಕಾಲಾವಧಿಯನ್ನುಅಂತಿಮಗೊಳಿಸುವುದು ಮತ್ತು ನಿಯಂತ್ರಣ ಕೋಷ್ಟಕದ(Control Table) ನವೀಕರಣ ನಡೆಯಲಿದೆ.
19ನೇ ಅಕ್ಟೋಬರ್ 2024 (ಶನಿವಾರ) ರಿಂದ 28ನೇ ಅಕ್ಟೋಬರ್ 2024 (ಸೋಮವಾರ) ರ ವರೆಗೆ ನಮೂನೆ 1 ರಿಂದ 8 ರ ತಯಾರಿ ಹಾಗೂ ಅರ್ಹತಾ ದಿನಾಂಕ 01.01.2025 ರಂತೆ ಸಮಗ್ರ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. 29ನೇ ಅಕ್ಟೋಬರ್ 2024 ರಂದು (ಮಂಗಳವಾರ) ಸಮಗ್ರ ಕರಡು ಮತದಾರರ ಪಟ್ಟಿಯ ಪ್ರಕಟಣೆ ಮಾಡಲಾಗುತ್ತದೆ.
ಸಾರ್ವಜನಿಕರು ತಮ್ಮ ಲೋಪದೋಷಗಳ ಕುರಿತಾಗಿ 29ನೇ ಅಕ್ಟೋಬರ್ 2024 (ಮಂಗಳವಾರ) ರಿಂದ 28ನೇ ನವೆಂಬರ್ 2024 (ಗುರುವಾರ) ರ ವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಕಾಶ ಇರುತ್ತದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು 24ನೇ ಡಿಸೆಂಬರ್ 2024 ರೊಳಗೆ (ಮಂಗಳವಾರ) ಮುಗಿಸಲಾಗುತ್ತದೆ.
01ನೇ ಜನವರಿ 2025 ರೊಳಗೆ (ಬುಧವಾರ) ಮತದಾರರ ಪಟ್ಟಿಗಳ ಗುಣಮಟ್ಟ ಪರಿಶೀಲನೆ ಮಾಡುವುದು ಹಾಗೂ ಅಂತಿಮ ಪ್ರಕಟಣೆಗಾಗಿ ಆಯೋಗದ ಅನುಮತಿಯನ್ನು ಪಡೆಯುವುದು ಮತ್ತು ದತ್ತಾಂಶವನ್ನು ನವೀಕರಿಸುವುದು ಮತ್ತು ಪೂರಕಗಳ ಮುದ್ರಣ ಮಾಡಲಾಗುತ್ತದೆ.
06ನೇ ಜನವರಿ 2025 ರಂದು (ಸೋಮವಾರ) ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಮಾಡಲಾಗುತ್ತದೆ.
ಮಲಯಾಳಂನ ‘ಆಟ್ಟಂ’ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ‘ರಾಷ್ಟ್ರೀಯ ಪ್ರಶಸ್ತಿ’ ಗೆಲುವು | Malayalam Movie Aattam