ಬೆಳಗಾವಿ : ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನು ಸದನ ಸಮಿತಿಗೆ ಒಪ್ಪಿಸಲು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹ ಮಾಡಿದರು. ಆದರೆ ಸ್ಪೀಕರ್ ಯುಟಿ ಖಾದರ್ ಇದಕ್ಕೆ ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸಭಾ ತ್ಯಾಗ ಮಾಡಿತು. ಸ್ಪೀಕರ್ ಒನ್ ಸೈಡ್ ಎಂದು ಘೋಷಣೆ ಕೂಗುತ್ತಾ ಪಕ್ಷಗಳು ಸಭಾ ತ್ಯಾಗ ಮಾಡಿದರು.
ಇಂದು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ವಿಧಾನಸಭೆಯಲ್ಲಿ ಸರ್ಕಾರ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಸರ್ಕಾರ ಮಂಡಿಸಿದ್ದ ಮಸೂದೆಗೆ ವಿಪಕ್ಷಗಳ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ವಿಧೇಯಕದ ಪ್ರತಿಗಳನ್ನು ಹರಿದು ಬಿಸಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ವಿಪಕ್ಷಗಳ ವಿರೋಧ ಹೆಚ್ಚಾಗುತ್ತಿದ್ದಂತೆ ಗದ್ದಲದ ನಡುವೆಯೇ ಮಸೂದೆಯನ್ನು ಸರ್ಕಾರ ಪಾಸ್ ಮಾಡಿಕೊಂಡಿತು.
ಮೊದಲ ದ್ವೇಷ ಭಾಷಣ ತಪ್ಪಿಗೆ 1 ರಿಂದ 7 ವರ್ಷ ಜೈಲು, 50 ಸಾವಿರ ರೂ ದಂಡ. ದ್ವೇಷ ಭಾಷಣ ಪುನರಾವರ್ತನೆಗೆ 2 ವರ್ಷದಿಂದ ಗರಿಷ್ಠ ಶಿಕ್ಷೆ 7 ವರ್ಷ ಜೈಲು, 1 ಲಕ್ಷ ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ಕೊಡಲಾಗಿದೆ. ತಪ್ಪು ಪುನರಾವರ್ತನೆಗೆ ಈ ಮೊದಲು 10 ವರ್ಷ ಜೈಲು ಇದ್ದಿದ್ದನ್ನು 7 ಕ್ಕೆ ಇಳಿಸಲಾಗಿದೆ ಅಂತ ಪರಮೇಶ್ವರ್ ಸ್ಪಷ್ಟಪಡಿಸಿದರು.
ಈ ವೇಳೆ ಬಿಜೆಪಿ ಸದಸ್ಯರ ಆಕ್ಷೇಪ ಸಚಿವ ಬೈರತಿ ಸುರೇಶ್ ಕರಾವಳಿ ಬಗ್ಗೆ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಕರಾವಳಿಯಲ್ಲಿ ಬೆಂಕಿ ಹಾಕಿ ಇಲ್ಲೂ ಬೆಂಕಿ ಹಾಕ್ತಿದ್ದಾರೆಂಬ ಬೈರತಿ ಸುರೇಶ್ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಯ್ತು. ಕರಾವಳಿ ಶಾಸಕರು ಕೆರಳಿ ಏಕಾಏಕಿ ಸದನದ ಬಾವಿಗಿಳಿದರು. ಇದರಿಂದ ವಿಪಕ್ಷಗಳ ಉಳಿದ ಸದಸ್ಯರಲ್ಲೂ ಗೊಂದಲ ಆಯ್ತು. ಕೊನೆಗೆ ಗದ್ದಲ ಹೆಚ್ಚಾಯ್ತು. ಗೊಂದಲ, ಗದ್ದಲದ ನಡುವೆ ಸರ್ಕಾರ ವಿಧೇಯಕ ಪಾಸ್ ಮಾಡಿಕೊಳ್ತು. ಅಶೋಕ್ ಸೇರಿ ಅನೇಕರು ಮಸೂದೆ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು








