ಶಿವಮೊಗ್ಗ: ಕಾಡಾನೆಗಳನ್ನು ಓಡಿಸೋದಕ್ಕೆ ಸಕ್ರೆಬೈಲಿನಿಂದ ನಾಲ್ಕು ಕುಮ್ಮಿ ಆನೆಗಳನ್ನು ಬರಗಿಗೆ ತರಿಸಲಾಗಿತ್ತು. ಕಾಡಾನೆಗಳು ದೂಗೂರು ಅರಣ್ಯದಿಂದ ಕಾನಹಳ್ಳಿ ಮೂಲಕ ಕಣ್ಣೂರು, ತ್ಯಾಗರ್ತಿಯಿಂದ ಬಂದ ದಾರಿಯ ಕಡೆಗೆ ಮುಖ ಮಾಡಿವೆ. ಈ ಹಿನ್ನಲೆಯಲ್ಲಿ ಬರಗಿಯಲ್ಲಿದ್ದಂತ ಕುಮ್ಕಿ ಆನೆಗಳಿಗೆ ಪೂಜೆ ಸಲ್ಲಿಸಿ ಸೊರಬ ಎಸಿಎಫ್ ಸುರೇಶ್ ಕುಳ್ಳಳ್ಳಿ ಇಂದು ಬೀಳ್ಗೊಟ್ಟರು.
ಶಿವಮೊಗ್ಗ ಜಿಲ್ಲೆಯ ಸೊರಬ ವ್ಯಾಪ್ತಿಗೆ ಕಾಡಾನೆಗಳು ಎಂಟ್ರಿಯಾಗಿ ಹದಿಮೂರು ದಿನಗಳ ಕಾಲ ಗಿರಕಿ ಹೊಡೆದಿದ್ದವು. ಅಲ್ಲಲ್ಲಿ ರೈತರ ಬೆಳೆ ನಾಶಪಡಿಸಿದ್ದವು. ಓಡಿಸೋ ಪ್ರಯತ್ನಕ್ಕೆ ಇಳಿದಿದ್ದಂತ ಅರಣ್ಯ ಇಲಾಖೆಗೆ ಸವಾಲನ್ನೇ ಹಾಕಿದಂತೆ ಸುತ್ತಿ ಸುತ್ತಿ ಮೂರು ನಾಲ್ಕು ದಿನಗಳ ಕಾಲ ಒಂದೇ ಕಾಡಿನಲ್ಲಿ ಬೀಡು ಬಿಟ್ಟಿದ್ದವು. ಇಂತಹ ಕಾಡಾನೆಗಳನ್ನು ಎರಡು ದಿನಗಳ ಹಿಂದಷ್ಟೇ ದೂಗೂರು ಕಾಡಿನಿಂದ ಕಾನಹಳ್ಳಿ, ಕಣ್ಣೂರು, ತ್ಯಾಗರ್ತಿ ಮೂಲಕ ಓಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿತ್ತು.
ಕಾಡಾನೆಗಳನ್ನು ಬಂದ ಕಡೆಗೆ ಓಡಿಸೋ ಕಾರ್ಯಾಚರಣೆಯನ್ನು ಸೊರಬ ಅರಣ್ಯ ಇಲಾಖೆಯ ಬಳಿಕ ಸಾಗರ ವಲಯದ ಅರಣ್ಯ ಇಲಾಖೆಯಿಂದ ಮುಂದುವರೆಸಲಾಗಿದೆ. ಇಂದು ಕನ್ನಿಯ ಮತ್ತು ಕೊರ್ಲಿಕೊಪ್ಪದಲ್ಲಿ ಕಾಡಾನೆಗಳು ಸಾಗುತ್ತಿರುವುದಾಗಿ ಥರ್ಮಲ್ ಡ್ರೋನ್ ಸ್ಕ್ಯಾನ್ ನಿಂದ ಖಚಿತವಾಗಿರೋದಾಗಿ ಸಾಗರ-ಸೊರಬ ಡಿಎಫ್ಓ ಮೋಹನ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಕುಂದೂರು ಕಾಡಿನ ಕಡೆಗೆ ಇಳಿದರೇ, ಮೈಲಾರಿಕೊಪ್ಪದಿಂದ ಬೆಳ್ಳಂದೂರು ಕಾಡಿಗೆ ಇಳಿಯೋ ಸಾಧ್ಯತೆ ಇದೆ. ಅಲ್ಲಿಂದ ಅಂಬಲಿಗೋಳ ಕಾಡಿಗೆ ಕಾಡಾನೆಗಳು ತೆರಳಿವೆ. ಕಾನಹಳ್ಳಿಯ ಕಾಡು ಹಿರೇಕಲಾವತಿ, ಮಲ್ಲಾಪುರದವರೆಗೆ ವ್ಯಾಪಿಸಿದ್ದು, ಆ ಕಾಡಿನಿಂದ ಬೆಳ್ಳಂದೂರು ಕಾಡಿಗೆ ಕಾಡಾನೆಗಳನ್ನು ತಿರುಗಿಸೋ ಕಾರ್ಯಾಚರಣೆಯನ್ನು ಇಲಾಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಕುಮ್ಕಿ ಆನೆಗಳ ಕಾರ್ಯಾಚರಣೆ ಅಂತ್ಯ, ಪೂಜೆ ಸಲ್ಲಿಸಿ ಬೀಳ್ಗೊಟ್ಟ ಸೊರಬ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು
ಮಡಸೂರಲ್ಲಿ ಬೀಡು ಬಿಟ್ಟಿದ್ದಂತ ಕಾಡಾನೆಗಳು, ಅಮಚಿ, ಹೊಳೆಕೊಪ್ಪ, ಬರಗಿ ಮೂಲಕ ದೂಗೂರು ಕಾಡು ತಲುಪಿದ್ದವು. ರೈತರ ಬಾಳೆ, ಕಬ್ಬು, ಅಡಿಕೆ ನಾಶಪಡಿಸಿದ್ದರಿಂದಾಗಿ ಕುಮ್ಕಿ ಆನೆಗಳ ಮೂಲಕ ಓಡಿಸೋ ಕಾರ್ಯಾಚರಣೆಗೆ ಅರಣ್ಯ ಇಲಾಖೆ ನಿರ್ಧರಿಸಿತ್ತು. ಅದರಂತೆ ಸಕ್ರೆಬೈಲಿನಿಂದ ನಾಲ್ಕು ಕುಮ್ಕಿ ಆನೆಗಳನ್ನು ಬರಗಿಗೆ ತರಿಸಲಾಗಿತ್ತು. ಅವುಗಳಿಂದ ದೂಗೂರು ಕಾಡಿನಲ್ಲಿ ಕಾಡಾನೆ ಓಡಿಸೋ ಕಾರ್ಯಾಚರಣೆ ನಡೆಸಲಾಯಿತು.
ಮೊದಲ ದಿನದ ಬಳಿಕ ಎರಡು ಮೂರನೇ ದಿನ ಬರಗಿ, ದೂಗೂರಲ್ಲಿ ಕುಮ್ಕಿ ಆನೆಗಳಿಂದ ಕಾಡಾನೆ ಓಡಿಸೋ ಕಾರ್ಯಾಚರಣೆ ನಡೆಸಲಾಗಿತ್ತು. ಎರಡು ದಿನಗಳ ಹಿಂದೆ ದೂಗೂರು ಕಾಡಿನಲ್ಲಿದ್ದಂತ ಕಾಡಾನೆಗಳು ರಾತ್ರೋ ರಾತ್ರಿ ಉಳವಿ ಕೆರೆಯಲ್ಲಿ ಈಜಿಕೊಂಡು ಕಾನಹಳ್ಳಿ ಕಾಡು ಸೇರಿದ್ದವು. ಹೆಜ್ಜೆ ಗುರುತುಗಳ ಆಧಾರದಲ್ಲಿ ಅವುಗಳ ಹಿಂದೆ ಬಿದ್ದಾಗ ಕಾನಹಳ್ಳಿಯಿಂದ ಕಣ್ಣೂರು, ತ್ಯಾಗರ್ತಿಗೂ ಸಾಗಿದ್ದು ಗೊತ್ತಾಗಿತ್ತು.
ತ್ಯಾಗರ್ತಿಯಲ್ಲಿ ರಸ್ತೆಯನ್ನು ಕಾಡಾನೆಗಳು ದಾಟುತ್ತಿರುವುದು ಥರ್ಮಲ್ ಡ್ರೋನ್ ನಲ್ಲಿಯೂ ಸೆರೆಯಾಗಿತ್ತು. ಹೀಗಾಗಿ ಬಂದ ದಾರಿಯಲ್ಲಿ ಕಾಡಾನೆಗಳು ಸಾಗುತ್ತಿರುವುದರಿಂದ ಇಂದು ಬರಗಿಯಲ್ಲಿ ಬಿಡಾರ ಹೂಡಿದ್ದಂತ ಕುಮ್ಕಿ ಆನೆಗಳಿಗೆ ಸೊರಬ ಎಸಿಎಫ್ ಸುರೇಶ್ ಕುಳ್ಳಳ್ಳಿ, ಆರ್ ಎಫ್ ಓ ಶ್ರೀಪಾದ್ ನಾಯ್ಕ್ ಪೂಜೆ ಸಲ್ಲಿಸಿ ಬೀಳ್ಗೊಟ್ಟರು.
ಅಲ್ಲದೇ ನಿಸ್ಸರಾಣಿ ಡಿ ಆರ್ ಎಫ್ ಓ ಮುತ್ತಣ್ಣ, ಉಳವಿ ಡಿ ಆರ್ ಎಫ್ ಓ ಯೋಗರಾಜ್, ಸಿಬ್ಬಂದಿಗಳು ಕುಮ್ಕಿ ಆನೆಗಳಿಗೆ ಪೂಜೆ ಸಲ್ಲಿಸಿ ಆತ್ಮೀಯವಾಗಿ ಬೀಳ್ಗೊಟ್ಟಿದ್ದು ಕಂಡು ಬಂದಿತು.
ಚಿಕ್ಕಲವತ್ತಿ ಕಾಡಲ್ಲಿ ಕಾಡಾನೆಗಳು ಪತ್ತೆ
ದೂಗೂರು, ಕಾನಹಳ್ಳಿ, ಕಣ್ಣೂರು, ತ್ಯಾಗರ್ತಿ ಮೂಲಕ ಸಾಗಿರುವಂತ ಕಾಡಾನೆಗಳು ಇಂದು ಚಿಕ್ಕಲವತ್ತಿಯಲ್ಲಿ ಇರುವುದಾಗಿ ಸಾಗರ ವಲಯದ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕನ್ನಿಯ ಮತ್ತು ಕೊರ್ಲಿಕೊಪ್ಪ ಬೆಟ್ಟದಲ್ಲಿ ಕಾಡಾನೆಗಳು ಇದ್ದು, ಅಲ್ಲಿಂದ ಕುಂದೂರು ಕಾಡಿನ ಕಡೆಗೆ ಓಡಿಸಿ, ಮೈಲಾರಿಕೊಪ್ಪದಿಂದ ಬೆಳ್ಳಂದೂರು ಕಾಡಿಗೆ ಓಡಿಸೋ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಆ ಬಳಿಕ ಶೆಟ್ಟಿಹಳ್ಳಿ, ಅಂಬಲಿಗೋಳ ಕಾಡಿಗೆ ಕಾಡಾನೆಗಳು ಬಂದ ಕಾಡಿಗೆ ಓಡಿಸೋದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಕಾಡಾನೆ ಓಡಿಸೋ ಸೊರಬ ವಲಯದ ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ
ಡಿಸೆಂಬರ್.1ರಂದು ಉಳವಿ ಹೋಬಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದಂತ ಕಾಡಾನೆಗಳು, ಕಾನಹಳ್ಳಿ, ಕೈಸೋಡಿ, ದೂಗೂರು, ಮಡಸೂರು, ಬರಗಿ, ಹೊಡಬಟ್ಟೆ ಸೇರಿದಂತೆ ವಿವಿಧೆಡೆ ರೈತರ ಬೆಳೆ ನಾಶ ಮಾಡಿತ್ತು. ಇಂತಹ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವುದೇ ಸೊರಬ ಅರಣ್ಯ ಇಲಾಖೆಗೆ ಸವಾಲ್ ಆಗಿ ಪರಿಣಮಿಸಿತ್ತು. ಈ ಸವಾಲನ್ನು ಸ್ವೀಕರಿಸಿ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ತಮ್ಮ ಗಡಿ ದಾಟಿಸುವಲ್ಲಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ಸಹಕರಿಸಿದಂತ ದೂಗೂರು, ಬರಗಿ, ಹೊಳೆಕೊಪ್ಪ, ಉಳವಿ, ಕಾನಹಳ್ಳಿ, ಕೈಸೋಡಿ, ಮೈಸಾವಿ ಸೇರಿದಂತೆ ಉಳವಿ ಹೋಬಳಿ ವ್ಯಾಪ್ತಿಯ ಜನತೆಗೆ ಅರಣ್ಯಾಧಿಕಾರಿಗಳು ಧನ್ಯವಾದವನ್ನು ತಿಳಿಸಿದ್ದಾರೆ.
ಕುಮ್ಕಿ ಆನೆಗಳನ್ನು ಬರಗಿಯಿಂದ ಬೀಳ್ಕೊಡುವಂತ ಸಂದರ್ಭದಲ್ಲಿ ವಾಚರ್ ಹಳೆ ಸೊರಬ ಲೋಕೇಶ್, ಸರೋಜಮ್ಮ, ಬರಗಿ ಲೋಕೇಶ್, ಕುಮಾರಪ್ಪ, ಬರಗಿ ಗ್ರಾಮಸ್ಥರಾದಂತ ನಿಂಗಪ್ಪ, ಕೆರೆಯಪ್ಪ, ನಾರಾಯಣಪ್ಪ, ದೂಗೂರು ಗ್ರಾಮ ಪಂಚಾಯ್ತಿಯ ಸದಸ್ಯ ಪುಟ್ಟಪ್ಪ ಸೇರಿದಂತೆ ಇತರರು ಇದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..







