ಹುಬ್ಬಳ್ಳಿ : “ಕೆಲವೊಮ್ಮೆ ಶಿಕ್ಷಣದಿಂದಲೂ ನಾವು ಎಡವಬಹುದು. ಆದರೆ ತಾಯಿ ನೀಡಿದ ಸಂಸ್ಕಾರದಿಂದ ಎಂದೂ ಎಡವಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ನಡೆದ ಮಾತೃಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಹದಿನಾಲ್ಕನೇ ಪುಣ್ಯ ಸ್ಮರಣೆ ಹಾಗೂ ‘ಅವ್ವ’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.
“ನಾವು ಎಷ್ಟೇ ಎತ್ತರಕ್ಕೆ ಏರಿದರು ತಾಯಿಗೆ ಮಗನಾಗಿಯೇ ಇರುತ್ತೇವೆ. ಜನರು ದೇವರು, ಧರ್ಮವನ್ನು ಬದಲಾವಣೆ ಮಾಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ತಾಯಿ ಹೇಳಿಕೊಟ್ಟ ಬದುಕಿನ ಪಾಠ ಹಾಗೂ ಗುರುವಿನ ಸ್ಥಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ.
ತಾಯಿ ಹೇಳಿಕೊಟ್ಟ ಸಂಸ್ಕಾರ, ಮಮತೆಯನ್ನು ಯಾವುದೇ ಕಾರಣಕ್ಕೂ ನಾವುಗಳು ಮರೆಯಲು ಸಾಧ್ಯವಿಲ್ಲ. ಈ ಅವ್ವ ಪ್ರಶಸ್ತಿ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿ ಕಾರ್ಯಕ್ರಮ. ಅವ್ವ ಹೆಸರಿನ ಪ್ರಶಸ್ತಿ ಪಡೆದವರು ಸಂತೋಷ ಪಡಬೇಡಿ ಏಕೆಂದರೆ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಬಂದಿದೆ. ಏಕೆಂದರೆ ಇಡೀ ಸಮಾಜವೇ ನಿಮ್ಮನ್ನು ಗಮನಿಸುತ್ತಿರುತ್ತದೆ. ನಿಮ್ಮೆಲ್ಲರ ಪ್ರತಿ ನಡೆಯು ಎಚ್ಚರಿಕೆಯಿಂದ ತುಂಬಿರಬೇಕು. ನಾವು ಜೀವನದಲ್ಲಿ ಎಲ್ಲವನ್ನು ಸಾಧಿಸಿದ್ದೇವೆ ಎಂದು ನೀವು ಸುಮ್ಮನೆ ಕೂರುವಂತಿಲ್ಲ. ಈ ಸಮಾಜವು ನಿಮ್ಮಿಂದ ಹೆಚ್ಚಿನ ಕೊಡುಗೆಯನ್ನು ಬೇಡುತ್ತದೆ.
ಗುರವ್ವ ಅವರು ಮುಧೋಳ ಭಾಗದ ಅತ್ಯಂತ ಶ್ರೀಮಂತ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು. ಈ ತಾಯಿ ಕೊಟ್ಟಂತಹ ಸಂಸ್ಕಾರ, ದೇವರು ಕೊಟ್ಟಂತಹ ಬುದ್ಧಿ, ಗುರು ಕೊಟ್ಟಂತಹ ವಿದ್ಯೆ ಇಳಿಸಿಕೊಳ್ಳಬೇಕು ಎಂದು ಹೊರಟ್ಟಿಯವರು ಈ ಸಮಾಜದ ಸೇವಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ.
ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ, ಬದುಕಿಗೆ ಅವಮಾನ. ಪ್ರತಿಯೊಬ್ಬ ಮನುಷ್ಯನಿಗೂ ಆದರ್ಶ ಮೌಲ್ಯವು ಜೀವನದಲ್ಲಿ ಇರಬೇಕು. ನಮ್ಮೆಲ್ಲರನ್ನು ಇಡೀ ಸಮಾಜ ಗಮನಿಸುತ್ತಿರುತ್ತದೆ.
ಮನುಷ್ಯನ ಹುಟ್ಟು ಹಾಕಸ್ಮಿಕ ಸಾವು ಅನಿವಾರ್ಯ ಆದರೆ ಈ ಹುಟ್ಟು ಸಾವಿರ ನಡುವೆ ನಾವು ಏನನ್ನ ಈ ಸಮಾಜಕ್ಕೆ ಕೊಟ್ಟು ಹೋಗುತ್ತೇವೆ ಎನ್ನುವುದು ಬಹಳ ಮುಖ್ಯ. ಮಾತೃಶ್ರೀ ಗುರವ್ವ ಅವರು ಬಸವರಾಜ ಅವರ ಮೂಲಕ ಈ ಸಮಾಜಕ್ಕೆ ಅತ್ಯುತ್ತಮವಾದ ಕೊಡುಗೆ ಕೊಟ್ಟಿದ್ದಾರೆ.
ಅವ್ವ ಪ್ರಶಸ್ತಿಯನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸರ್ಕಾರಿ ಶಾಲೆಯ ಅಂಕಿತ ಎನ್ನುವ ವಿದ್ಯಾರ್ಥಿಗೆ ನೀಡಲಾಗಿದೆ. ಈ ಹೆಣ್ಣುಮಗಳನ್ನು ಮನೆಗೆ ಕರೆದು 5 ಲಕ್ಷ ಚೆಕ್ ನೀಡಿ ಪ್ರೋತ್ಸಾಹ ನೀಡಿದ್ದೆ.
ನಾವು ಎಷ್ಟು ದಿನ ಬದುಕುತ್ತೇವೆ ಎಂದು ಮುಖ್ಯವಲ್ಲ. ಬದುಕಿದ್ದಾಗ ಏನು ಸಾಧನೆ ಮಾಡಿದ್ದೇವೆ ಅನ್ನೋದು ಮುಖ್ಯ. ಕೆಂಗಲ್ ಹನುಮಂತಯ್ಯ ರವರನ್ನು ಎಸ್.ಎಂ. ಕೃಷ್ಣ ಅವರನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ. ವಿಧಾನಸೌಧ, ವಿಕಾಸಸೌಧ, ಮೆಟ್ರೋ ಸೇರಿದಂತೆ ಅನೇಕ ಸಾಕ್ಷಿ ಗುಡ್ಡಗಳನ್ನು ಈ ಇಬ್ಬರು ನಮ್ಮ ನಡುವೆ ಬಿಟ್ಟು ಹೋಗಿದ್ದಾರೆ.
ಅಮ್ಮನ ಮಾತೇ ಅಮೃತ, ಅಮ್ಮನ ಪ್ರೀತಿಯೇ ಜೀವಾಮೃತ, ತಾಯಿ ಎಂದರೆ ಉಸಿರು ನೀಡಿದ ದೇವರು, ತಾಯಿ ಎಂದರೆ ದಾರಿ ತೋರಿದ ಗುರು.
ಭೀಷ್ಮ ಧರ್ಮರಾಯನಿಗೆ ಒಂದು ಮಾತು ಹೇಳುತ್ತಾನೆ. ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ತಂದೆ ತಾಯಿ, ಗುರು, ದೇವರ ಹಾಗೂ ಸಮಾಜದ ಋಣದಲ್ಲಿ ಹುಟ್ಟುತ್ತಾನೆ. ಈ ಋಣಗಳನ್ನು ಧರ್ಮದಿಂದ ತಿರಿಸಬೇಕು. ಆದ ಕಾರಣ ಬಸವರಾಜ ಹೊರಟ್ಟಿ ಅವರು ತಾಯಿಯವರ ಋಣವನ್ನು ಧರ್ಮದಿಂದ ಸಮಾಜ ಸೇವೆ ಮೂಲಕ ತೀರಿಸುತ್ತಾ ಇದ್ದಾರೆ.
ಅಮ್ಮನ ನೆನಪು ಪ್ರೀತಿಯ ಮೂಲ. ಗುರುವಿನ ನೆನಪು ಜ್ಞಾನದ ಮೂಲ. ದೇವರ ನೆನಪು ಭಕ್ತಿಯ ಮೂಲ. ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನಾವುಗಳೇ ಭಾಗ್ಯವಂತರು. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎನ್ನುವ ಪುರಂದರದಾಸರ ಮಾತಿನಂತೆ ನಾವೆಲ್ಲರೂ ಭಾಗ್ಯ ಮಾಡಿದ್ದೇವೆ.
ಕೈ ಜೊತೆ ಉತ್ತಮ ಸ್ನೇಹ
ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನದಲ್ಲಿ ಕುಳಿತುಕೊಂಡಾಗ ಯಾವುದೇ ಕಾರಣಕ್ಕೂ ಅವರು ತಮ್ಮ ಸ್ಥಾನದ ಜನತೆಯನ್ನು ಬಿಟ್ಟುಕೊಟ್ಟವರಲ್ಲ. ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವವರಲ್ಲ. ಹೊರಟ್ಟಿ ಅವರು ಕಾಂಗ್ರೆಸ್ ಹೊರತುಪಡಿಸಿ ಜನತಾದಳದ ಎಲ್ಲಾ ಬಣಗಳಿಂದ ನಿಂತು ಗೆಲುವು ಕಂಡಿದ್ದಾರೆ. ಇತ್ತೀಚೆಗೆ ಬಿಜೆಪಿ ಸೇರಿಯೂ ಗೆದ್ದಿದ್ದಾರೆ. ಆದರೂ ಈ ‘ಕೈ’ ಜೊತೆಗೆ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಆದರೆ ಅವರ ಸ್ಪೀಕರ್ ಸ್ಥಾನದ ಜನತೆಯನ್ನು ಎಂದಿಗೂ ಅವರು ಕಡಿಮೆ ಮಾಡಿಲ್ಲ.
ಯಾವ ಸ್ಥಾನಕ್ಕೆ ಹೇಗೆ ಗೌರವ ನೀಡಬೇಕು ಎಂಬುದು ಇವರಿಗೆ ತಿಳಿದಿದೆ. ವಿಧಾನಸಭೆ ಕಲಾಪ ನಡೆಯುವಾಗ ನಾನು ಬಿಜೆಪಿಗೆ ಸೇರಿದ ವ್ಯಕ್ತಿಯಲ್ಲ ಎಲ್ಲಾ ಪಕ್ಷಕ್ಕೆ ಸೇರಿದ ವ್ಯಕ್ತಿ ಎಂದು ಹೇಳಿದ್ದನ್ನು ಕೇಳಿದ್ದೇನೆ. ಉನ್ನತ ಸ್ಥಾನದಲ್ಲಿ ಕುಳಿತಿರುವ ಹೊರಟ್ಟಿ ಅವರಿಗೆ ಮಾತೃಶ್ರೀ ಗುರವ್ವ ಅವರು ಜನ್ಮ ನೀಡಿದ್ದಾರೆ. ಪ್ರತಿಯೊಬ್ಬ ಜನಸಾಮಾನ್ಯ ಕೂಡ ಉನ್ನತ ಸ್ಥಾನಕ್ಕೆ ಏರಬಹುದು. ಆದರೆ ನಮಗೆ ಉನ್ನತ ಸ್ಥಾನಕ್ಕೆ ಏರುವ ಛಲ ಇರಬೇಕು.
ಬಸವರಾಜ ಹೊರಟ್ಟಿ ಅವರು ದೂರವಾಣಿ ಕರೆ ಮಾಡಿ ತಮ್ಮ ತಾಯಿಯ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಿದ್ದೇನೆ. ಅನೇಕ ಗಣ್ಯರು ಬಂದು ಈ ಪ್ರಶಸ್ತಿಯನ್ನು ನೀಡಿದ್ದಾರೆ. ನೀವು ಕಾರ್ಯಕ್ರಮದಲ್ಲಿ ಇರಬೇಕು ಎಂದು ತಿಳಿಸಿದರು. ಅನೇಕ ಕಾರ್ಯಕ್ರಮಗಳ ಒತ್ತಡ ಇದ್ದರೂ ಅವರು ಬರಲೇಬೇಕು ಎಂದು ಆದೇಶ ನೀಡಿದರು. ಅದಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಸಿದ್ದೇನೆ. ಹೊರಟ್ಟಿ ಅವರು ಒಂದು ಆದೇಶ ನೀಡಿದರೆ ಇಡೀ ಸರ್ಕಾರವೇ ಅವರ ಆದೇಶ ಪಾಲಿಸಬೇಕು. ಮುಖ್ಯಮಂತ್ರಿಗಳೇ ಇವರ ಬಳಿ ಬರಬೇಕು. ಅಂತಹ ಪೀಠದಲ್ಲಿ ಕುಳಿತಿದ್ದಾರೆ.
ಕೆಳಮನೆ ಅಧಿಕಾರ ಎಂದಿಗೂ ಶಾಶ್ವತವಲ್ಲ. ನಮ್ಮ ಅಧಿಕಾರ ಯಾವಾಗ ಬೇಕಾದರೂ ವಿಸರ್ಜನೆ ಆಗಬಹುದು. ಈಗ ಪ್ರಹ್ಲಾದ್ ಜೋಷಿ ಅವರು ಒಂದು ದೇಶ ಒಂದು ಚುನಾವಣೆ ಕಾನೂನು ತರುತ್ತಿದ್ದಾರೆ. ಆದರೆ ಮೇಲ್ಮನೆ ಅಧಿಕಾರ ಮಾತ್ರ 6 ವರ್ಷ ನಿರಾತಂಕ. ಇಂತಹ ಹುದ್ದೆಗೆ 8 ಬಾರಿ ಆಯ್ಕೆಯಾಗಿದ್ದಾರೆ. ನಾನೂ ಸಹ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಆದರೆ ನಾನು ಒಮ್ಮೆ ಸೋತಿದ್ದೇನೆ. ಆದರೂ ಹೊರಟ್ಟಿ ಅವರ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅಭಿವೃದ್ಧಿಯೇ ನಮ್ಮ ತಾಯಿ ತಂದೆ, ಗ್ಯಾರಂಟಿಯೇ ನಮ್ಮ ಬಂಧು ಬಳಗ: ಡಿಸಿಎಂ ಡಿ.ಕೆ. ಶಿವಕುಮಾರ್