ಬೆಂಗಳೂರು : ನೌಕರರಿಗೆ ನಾನು ಕಾನೂನು ಬಾಹಿರವಾಗಿ ಏನೂ ಹೇಳಿಲ್ಲ. ಕಾನೂನು ಪಾಲನೆ ಮಾಡಿ ಎಂದು ಹೇಳುತ್ತಿದ್ದೇವೆ. ಗಣವೇಷ ಹಾಕಿದ್ದಕ್ಕೆ ಪಿಡಿಒ ಸಸ್ಪೆಂಡ್ ಮಾಡಲಾಗಿದೆ ಹೊರತು, ಯಾರದ್ದೋ ಪಿಎ ಅಂತ ಸಸ್ಪೆಂಡ್ ಮಾಡಿದ್ದಲ್ಲ, ನಿಯಮ ಉಲ್ಲಂಘಿಸಿದ್ದಕ್ಕೆ ಅಮಾನತು ಮಾಡಿದ್ದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ರಾಯಚೂರು ಪಿಡಿಒ ಪ್ರವೀಣ್ ಕುಮಾರ್ ಅಮಾನತು ವಿಚಾರವಾಗಿ ಅವರು ಪ್ರತಿಕ್ರಿಯಿಸಿದ ಅವರು, ಸಿಎಂ – ಪಿಎ ಇರಲಿ, ಮತ್ತೊಬ್ಬರ ಪಿಎ ಇರಲಿ. ನಿಯಮ ಮೀರಿದರೆ ಅಮಾನತು ಮಾಡುತ್ತೇವೆ. ಗಣವೇಷ ಹಾಕಲು ಇವರಿಗೆ ಸರ್ಕಾರದ ಅನುಮತಿ ಇದೆಯಾ?. ನಿನ್ನೆ ಮುಖ್ಯ ಕಾರ್ಯದರ್ಶಿಗಳಿಗೆ ಖುದ್ದಾಗಿ ಪತ್ರ ಬರೆದಿದ್ದೇನೆ. ಇದು ಅಕ್ಷರಶಃ ಪಾಲನೆ ಆಗಬೇಕು ಅಂತ ಹೇಳಿದ್ದೇನೆ. ಸುಮ್ಮನೆ ಯಾರಿಗೋ ಹೋಗಿ ಬೆನ್ನಹಿಂದೆ ಬಿದ್ದು ಇದನ್ನು ಮಾಡಿದ್ದಲ್ಲ. ರಿಪೋರ್ಟ್, ಪುರಾವೆ ಇದ್ದರೆ ಅಮಾನತು ಮಾಡುತ್ತೇವೆ.
ನಾನು ಕಾನೂನುಬಾಹಿರವಾಗಿ ಏನೂ ಹೇಳಿಲ್ಲ. ಕಾನೂನು ಪಾಲನೆ ಮಾಡಿ ಅಂತಿದ್ದೇವೆ. ಅದಕ್ಕೆ ಮೈಮೇಲೆ ಬಿದ್ದರೆ ಹೇಗೆ. ಗಣವೇಷ ಹಾಕಿದ್ದಕ್ಕೆ ಸಸ್ಪೆಂಡ್ ಮಾಡಲಾಗಿದೆ. ನೀವು ನಮ್ಮ ಬೆನ್ನು ತಟ್ಟಬೇಕಲ್ಲ. ಅದನ್ನ ಬಿಟ್ಟು ಯಾಕೆ ಮಾಡಿದ್ದೀರಾ ಅಂದ್ರೆ?. ಉದ್ದೇಶಪೂರ್ವಕವಾಗಿ ಎಲ್ಲಿ ಮಾಡಿದ್ದೇವೆ. ಈ ರೀತಿ ನಮ್ಮ ಪಿಎ ಇದ್ದರೂ ಸಸ್ಪೆಂಡ್ ಮಾಡುತ್ತೇನೆ. ಅವರು ಯಾರ ಪಿಎಗಳೇ ಇರಲಿ ಎಂದು ಸ್ಷಷ್ಟನೆ ನೀಡಿದರು.