ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊರೋನಾ ಬಳಿಕ ಅದ್ಧೂರಿಯಾಗಿ ಹಬ್ಬ ಆಚರಿಸಲು ಜನ ಸಜ್ಜಾಗಿದೆ. ಆದರೆ ದೀಪಾವಳಿ ಅಮಾವಾಸ್ಯೆಯ ಅಕ್ಟೋಬರ್ 25ರಂದೇ ಸೂರ್ಯ ಗ್ರಹಣ ಸಂಭವಿಸಲಿದೆ.
ಮಂಗಳವಾರ ಸಂಜೆ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. 3 ವರ್ಷಗಳ ಬಳಿಕ ಗೋಚರವಾಗುವ ಈ ಪಾರ್ಶ್ವ ಸೂರ್ಯಗ್ರಹಣದ ಕೌತುಕವನ್ನ ಕಣ್ತುಂಬಿಕೊಳ್ಳಲು ಇಡೀ ದೇಶದ ಜನ ಕಾತುರದಿಂದ ಕಾಯುತ್ತಿದ್ದಾರೆ. ಕಾರ್ತಿಕ ಅಮಾವಾಸೆಯಂದೇ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಇದರಿಂದ ದೀಪಾವಳಿ ಹಬ್ಬದ ವಿಶೇಷ ದಿನಗಳಲ್ಲಿ ದೇವಸ್ಥಾನಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಬಂದಿದೆ.
ಬೆಂಗಳೂರಿನ ಪ್ರಮುಖ ದೇವಾಲಯಗಳು ಗ್ರಹಣ ಸಂದರ್ಭದಲ್ಲಿ ಬಂದ್ ಆಗಲಿದ್ದು, ದರ್ಶನದ ಅವಧಿಯಲ್ಲೂ ಬದಲಾವಣೆಯಾಗಲಿದೆ. ಶನೇಶ್ವರ ದೇಗುಲ ಮಾತ್ರ ಗ್ರಹಣದ ಸಂದರ್ಭದಲ್ಲಿ ತೆರೆದಿರಲಿದ್ದು, ನಿರಂತರ ಪೂಜೆ ಪುನಸ್ಕಾರ ನಡೆಯಲಿದೆ. ಬರೋಬ್ಬರಿ 27 ವರ್ಷದ ಬಳಿಕ ಅಂದ್ರೆ 1995ರ ಬಳಿಕ ಮತ್ತೆ ದೀಪಾವಳಿ ಹಬ್ಬದಂದೂ ಸೂರ್ಯನಿಗೆ ಗ್ರಹಣ ಹಿಡಿಯುತ್ತಿದೆ.
ಹಬ್ಬದ ಸಂಭ್ರಮದಲ್ಲೇ ಗ್ರಹಣದ ಕಾರ್ಮೋಡ ಆವರಿಸಿರೋದ್ರಿಂದ ಜನರಿಗೂ ಕೊಂಚ ಭಯ. ಶುಭ-ಅಶುಭದ ಲೆಕ್ಕಾಚಾರ ಶುರುವಾಗಿದ್ದು, ಜನ ದೇಗುಲಗಳಲ್ಲಿ ಶಾಂತಿ ಹೋಮಕ್ಕಾಗಿ ಮುಗಿಬಿದ್ದಿದ್ದಾರೆ. ಗ್ರಹಣ ಮೋಕ್ಷವಾದ ಬಳಿಕ ಮಂಗಳವಾರವೇ ಹಲವಾರು ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ಇದ್ರೆ, ಕೆಲವು ದೇಗುಲದಲ್ಲಿ ಬುಧವಾರ ಇರಲಿದೆ. ದೇಗುಲಗಳಲ್ಲಿ ಶಾಂತಿಹೋಮದ ಪೂಜೆಗಳಿಗೆ ಬುಕ್ಕಿಂಗ್ ಜೋರಾಗಿದೆ.