ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ಧೆಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿ ಬರೋಬ್ಬರಿ 24 ಕೋಟಿ ರೂಪಾಯಿ ದೋಚಿದ್ದ ಜಾಲವನ್ನು ಭೇದಿಸುವಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಹರಡಿಕೊಂಡಿದ್ದ ಈ ದಗಾಬಾಜರ ಜಾಲದ 6 ಮಂದಿ ಆರೋಪಿಗಳನ್ನು ಸದ್ಯ ಖೆಡ್ಡಾಕ್ಕೆ ಕೆಡವಲಾಗಿದ್ದು, ಇವರಿಂದ ಕೋಟ್ಯಂತರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹೈಪ್ರೊಫೈಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ ಅವರು ಸುದ್ದಿಗಾರರಿಗೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ದೇಶದ ಮೂಲೆ ಮೂಲೆಗಳಲ್ಲಿದ್ದ ಕಿಲಾಡಿಗಳ ಬಂಧನ
ಬೆಂಗಳೂರು ಸಿಟಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಅನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ದೇಶದ ವಿವಿಧೆಡೆ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಹೀಗೆ ಗುರುತಿಸಲಾಗಿದೆ:
-
ಎ. ಮಲ್ಲಿಕ್ (ಮುಂಬೈ)
-
ಶಿವಗ್ಯಾನಂ (ತಮಿಳುನಾಡು)
-
ಪಾಲಕ್ ಬೈ ಪಟೇಲ್ (ಗುಜರಾತ್)
-
ಮೊಹಮ್ಮದ್ ಹಮೀದ್ (ಗುಜರಾತ್)
-
ಓಂ ಪ್ರಕಾಶ್ (ದೆಹಲಿ) ಹಾಗೂ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.
₹1.46 ಕೋಟಿ ಜಪ್ತಿ; 23 ಬ್ಯಾಂಕ್ ಖಾತೆಗಳ ಲಿಂಕ್!
“ಬಂಧಿತ ಆರೋಪಿಗಳಿಂದ ಸದ್ಯಕ್ಕೆ 1 ಕೋಟಿ 46 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ಉಳಿದ ಹಣವನ್ನು ರಿಕವರಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ವಂಚಕರು ಸಂತ್ರಸ್ತ ವೃದ್ಧೆಯಿಂದ ಬರೋಬ್ಬರಿ 23 ವಿಭಿನ್ನ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ” ಎಂದು ಡಿಜಿಪಿ ಪ್ರಣವ್ ಮೊಹಾಂತಿ ತಿಳಿಸಿದ್ದಾರೆ.
ಹಳೇ ಗಿರಾಕಿಗಳೇ ಈ ಸೈಬರ್ ಖದೀಮರು!
ಬಂಧಿತರ ಪೈಕಿ ತಮಿಳುನಾಡು ಮೂಲದ ಶಿವಗ್ಯಾನಂ ಹಾಗೂ ಗುಜರಾತ್‌ನ ಪಾಲಕ್ ಬೈ ಪಟೇಲ್ ಹಳೇ ಸೈಬರ್ ಕ್ರಿಮಿನಲ್‌ಗಳಾಗಿದ್ದಾರೆ. ಇವರಿಬ್ಬರೂ ಈ ಹಿಂದೆ ತಲಾ 4 ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದರು. ಇವರು ಶ್ರೀಮಂತ ಹಾಗೂ ಒಂಟಿಯಾಗಿರುವ ವೃದ್ಧರನ್ನು ಟಾರ್ಗೆಟ್ ಮಾಡಿ, ಅವರ ಸಂಪೂರ್ಣ ಮಾಹಿತಿ (ಪ್ರೊಫೈಲ್) ಕಲೆಹಾಕಿ ಈ ಸ್ಕೆಚ್ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಸ್ಟರ್ ಮೈಂಡ್ ಇನ್ನೂ ತಲೆಮರೆಸಿಕೊಂಡಿದ್ದಾನೆ: “ಈ ಇಡೀ ಕೃತ್ಯದ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಜಾಲವಿರುವ ಶಂಕೆಯಿದೆ. ಪ್ರಸ್ತುತ 6 ಜನರನ್ನು ಬಂಧಿಸಲಾಗಿದ್ದರೂ, ಈ ₹24 ಕೋಟಿ ಮಹಾ ವಂಚನೆ ಪ್ರಕರಣದ ಅಸಲಿ ಸೂತ್ರಧಾರಿ (Master Mind) ಇನ್ನು ಸಿಕ್ಕಿಬಿದ್ದಿಲ್ಲ. ಪ್ರಕರಣ ಈಗ ತನಿಖಾ ಹಂತದಲ್ಲಿದ್ದು, ತಲೆಮರೆಸಿಕೊಂಡಿರುವ ಕಿಂಗ್‌ಪಿನ್ ಹಾಗೂ ಉಳಿದ ಆರೋಪಿಗಳ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುವುದು” ಎಂದು ಪ್ರಣವ್ ಮೊಹಾಂತಿ ಭರವಸೆ ನೀಡಿದ್ದಾರೆ.
ಸದ್ಯ ಆರೋಪಿಗಳ ಹಳೆ ಸೈಬರ್ ಅಪರಾಧಗಳ ಹಿನ್ನೆಲೆ ಹಾಗೂ ಈ ಹಣ ಎಲ್ಲೆಲ್ಲಿಗೆ ಹರಿದುಹೋಗಿದೆ ಎಂಬ ಬಗ್ಗೆ ಸೈಬರ್ ಕಮಾಂಡ್ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.








