ಶಿವಮೊಗ್ಗ: ನಗರದ ದುಮ್ಮಳ್ಳಿಯಲ್ಲಿ ಬಳಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. 26 ವರ್ಷದ ಅಮಿತಾ ಮೃತ ದುರ್ದೈವಿ. ದುಮ್ಮಳ್ಳಿಯ ಕರುಣಾಕರ ಎಂಬಾತ ಹತ್ಯೆ ಮಾಡಿದ ಆರೋಪಿ.
ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಗಂಡ, ಹೆಂಡತಿ ನಡುವೆ ಜಗಳ ನಡೆದಿದೆ. ಕೋಪಗೊಂಡ ಕರುಣಾಕರ, ಹೆಂಡತಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅಮಿತಾಳ ಕುತ್ತಿಗೆ, ಭುಜ, ಕಿವಿ ಮತ್ತು ಪಕ್ಕೆಗೆ ಚಾಕುವಿನಿಂದ ಚುಚ್ಚಿದ್ದು, ನೋವಿನಿಂದ ಆಕೆ ಜೋರಾಗಿ ಕೂಗಿಕೊಂಡಿದ್ದಾಳೆ. ನಂತರ ಸ್ಥಳಕ್ಕಾಮಿಸಿದ ಅಕ್ಕಪಕ್ಕದವರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದು, ಅಷ್ಟರಲ್ಲೇ ಮೃತಪಟ್ಟಿದ್ದಾಳೆ.
ಎಂಬಿಎ ಪದವೀಧರನಾಗಿರುವ ಕರುಣಾಕರನಿಗೆ ಎರಡೂವರೆ ವರ್ಷದ ಹಿಂದೆ ಬುಳ್ಳಾಪುರದ ಅಮಿತಾ ಜತೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಯುವತಿಯ ಪೋಷಕರು ಬಂಗಾರ ಮತ್ತು ಹಣ ಕೊಟ್ಟಿದ್ದರೂ ಕೂಡ ಇನ್ನೂ ಹೆಚ್ಚಿಗೆ ಬೇಕು ಎಂದು ಪೀಡಿಸುತ್ತಿದ್ದನಂತೆ. ಇದೇ ವಿಷಯಕ್ಕೆ ಜಗಳ ತೆಗೆದು ದುಷ್ಕೃತ್ಯ ಎಸಗಿದ್ದಾನೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ.