ಬೆಂಗಳೂರು : ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಇದ್ದ ಜಿಟಿಜಿಟಿ ಮಳೆ ಅಂತ್ಯಗೊಂಡಿದೆ. ಬಿಸಿಲು ಬೆಳಗ್ಗೆ ಮತ್ತು ರಾತ್ರಿ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಇದು ನಗರದಲ್ಲಿ ಚಳಿಯ ಪ್ರಮಾಣ ಏರಿಕೆ ಆಗುವುದರ ಮುನ್ಸೂಚನೆಯಾಗಿದೆ.
ಸೋಮವಾರ ನಗರದಾದ್ಯಂತ ಬೆಳಗ್ಗೆ ಮಂಜು ಕವಿದ ವಾತಾವರಣ ಕಂಡು ಬಂದಿದ್ದು, ಮಧ್ಯಾಹ್ನ ಬಿರು ಬಿಸಿಲು ಕಂಡು ಬಂತು. ಕಳೆದ ಒಂದು ವಾರದಲ್ಲಿ ಆಗಾಗ ಸುರಿಯುತ್ತಿದ್ದ ಮಳೆಗೆ ಮುಕ್ತ ದೊರೆತಿದೆ. ಚಳಿಗಾಲ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಚಳಿಯ ಪ್ರಮಾಣ ಕ್ರಮೇಣ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹಿಂಗಾರು ಮಳೆ ಆರಂಭವಾಗಿದ್ದು ಬೆಂಗಳೂರು ಸೇರಿ ರಾಜ್ಯಾದ್ಯಂತ ಕೆಲವು ದಿನ ಮಳೆ ಸುರಿದಿತ್ತು. ಮುಂದಿನ ದಿನಗಳಲ್ಲಿ ಅಂತಹ ವಾತಾವರಣ ಕಂಡು ಬರುವುದು ತೀರಾ ವಿರಳ. ಬದಲಾಗಿ ಬೆಳಗ್ಗೆ ಮತ್ತು ರಾತ್ರಿ ಮಂಜು ಕವಿದ ವಾತಾವರಣ ಜೊತೆಗೆ ಮಧ್ಯಾಹ್ನ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗಲಿದೆ. ಮಳೆ ಬುರುವುದು ಅಪರೂಪ ಎನ್ನಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ. ಪ್ರಸಾದ್ ತಿಳಿಸಿದರು.
ಹವಾಮಾನ ಮುನ್ಸೂಚನೆ ಪ್ರಕಾರ, ಮಂಗಳವಾರ ಒಂದುದಿನದ ನಗರ ಕೆಲವು ಕಡೆಗಳಲ್ಲಿ ತುಂತುರು ಇಲ್ಲವೇ ಹಗುರವಾಗಿ ಮಳೆ ಬರಬಹುದು. ಇದರ ಹೊರತಾಗಿ ಸದ್ಯಕ್ಕೆ ಬೆಂಗಳೂರು ಮಳೆ ಮುನ್ಸೂಚನೆಗಳು ಇಲ್ಲ. ಮುಂದಿನ ಒಂದು ವಾರದ ಕಾಲ ಬಿಸಿಲಿನ ಧಗೆ ಬಾಧಿಸಲಿದೆ ಎಂದು ಅವರು ತಿಳಿಸಿದರು.
ತಾಪಮಾನ ಇನ್ನಷ್ಟು ಇಳಿಕೆ ಸಾಧ್ಯತೆ ನಿತ್ಯವು ಬೆಳಗ್ಗೆ ಕನಿಷ್ಠ ತಾಪಮಾನ ಕೆಳಮಟ್ಟಕ್ಕೆ ಹೋಗಲಿದೆ. ಮಧ್ಯಾಹ್ನ ಇದರ ತದ್ವಿರುದ್ಧ ವಾತಾವರಣ ನಿರ್ಮಾಣವಾಗಲಿದೆ. ಬೆಳಗ್ಗೆ ಮತ್ತು ರಾತ್ರಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಗರಿಷ್ಠ ತಾಪಮಾನ 28ಡಿಗ್ರಿ ಸೆಲ್ಸಿಯಸ್ ಕೆಲವೊಮ್ಮೆ ಇದಕ್ಕೂ ಹೆಚ್ಚು ದಾಖಲಾಗುವ ನಿರೀಕ್ಷೆ ಇದೆ.
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸೋಮವಾರದ ಗರಿಷ್ಠ ತಾಪಮಾನ ನೋಡುವುದಾದರೆ ಬೆಂಗಳೂರು ವಿಮಾನ ನಿಲ್ದಾಣ ಭಾಗದಲ್ಲಿ ಗರಿಷ್ಠ 24 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗರಿಷ್ಠ 23ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್ಎಎಲ್ ಏರ್ಪೋರ್ಟ್ ಗರಿಷ್ಠ 26ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶ ಮತ್ತು ಚಳಿಯ ಪ್ರಮಾಣದಲ್ಲಿ ಏರಿಳಿತಗಳು ಹೀಗೆ ಮುಂದುವರಿಯುವ ಸಾಧ್ಯತೆ ಇದೆ.