ಬೆಂಗಳೂರು: ಗ್ರಾಮ ಲೆಕ್ಕಿಗರು ಮನೆ ಬಾಗಿಲಿಗೆ ತೆರಳಿ ಆರ್‌ಟಿಸಿ-ಆಧಾರ್ ಜೋಡಣೆ ಕೆಲಸದಲ್ಲಿ ತೊಡಗಿದ್ದಾರೆ. 88 ಸಾವಿರ ಆರ್‌ಟಿಸಿಗಳಲ್ಲಿ ಕೃಷಿ ಭೂಮಿ ಇರುವುದು ಕಂಡುಬಂದಿದೆ. ಆಧಾರ್ ಲಿಂಕ್ ಮಾಡಲಾಗಿದೆ.
ಬಾಕಿ ಪೋಡಿ ಹಾಗೂ ದುರಸ್ತಿ ಪ್ರಕರಣ ಇತ್ಯರ್ಥಕ್ಕೆ ಮೊದಲು ನಿಖರವಾದ ಆಕಾರ್ ಬಂದ್ ಮಾಹಿತಿ ಪಡೆಯಬೇಕು. ನಿಖರವಾದ ಆಕಾರ್ ಬಂದ್ ಇಲ್ಲದೇ ಆರ್‌ಟಿಸಿ ಜೊತೆಗೆ ಜೋಡಣೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಮುಂದಿನ 2 ತಿಂಗಳಲ್ಲಿ 65 ಲಕ್ಷ ಆಕಾರ್ ಬಂದ್ ಡಿಜಿಟಲೀಕರಣಗೊಳಿಸಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಇದಲ್ಲದೇ ಬೇಸಿಗೆ ಹಿನ್ನೆಲೆ ನೀರಿನ ಅಭಾವವಿರುವ ಬೆಂಗಳೂರು ನಗರದ ಪ್ರದೇಶಗಳಲ್ಲಿ ಖಾಸಗಿ ಟ್ಯಾಂಕರ್‌ಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆಯಲು ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದೆ. ಮಾರ್ಚ್ 7ರೊಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಲು ಟ್ಯಾಂಕರ್ ಮಾಲೀಕರಿಗೆ ಗಡುವು ನೀಡಲಾಗಿದೆ. ಇನ್ನೂ ಅಂಗಾಂಗ ದಾನ ಕೋರಿ ನೋಂದಾಯಿಸಿಕೊಂಡವರ ಸಂಖ್ಯೆ 8 ಸಾವಿರಕ್ಕೂ ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ 178 ಅಂಗಾಂಗ ದಾನ ನಡೆದಿದೆ. ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಅಂಗಾಂಗ ದಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು, ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇದಲ್ಲದೇ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ. ಇವಿ ಚಾರ್ಜಿಂಗ್ ಸ್ಥಾಪನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ರಾಜ್ಯದಲ್ಲಿ 5 ಸಾವಿರಕ್ಕಿಂತ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ.