ಧಾರವಾಡ : ಮುಡಾ ಹಗರಣ, ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ ಕಳಚಿದ್ದು, ಭ್ರಷ್ಟಾಚಾರ ಮೆತ್ತಿಕೊಂಡಿದೆ.ಹೀಗಾಗಿ ಅವರು ರಾಜೀನಾಮೆ ನೀಡುವುದು ಗ್ಯಾರಂಟಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭವಿಷ್ಯ ನುಡಿದರು.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಜೊತೆಗೆ ಚರ್ಚಿಸಿದ್ದಾರೆ. ಅಲ್ಲದೆ ಹೈಕಮಾಂಡ್ ಕೂಡ ಇವರ ಬೆನ್ನಿಗೆ ನಿಲ್ಲುತ್ತೆ ಎಂದು ತಿಳಿಸಿದ್ದಾರೆ. ಹೀಗಾಗಿ ಅವರು ಶಾಸಕರ ಸಭೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ನಡೆಸಿದ್ದಾರೆ. ಈ ಕಾರಣದಿಂದಲೇ ಅವರು ದೆಹಲಿ ನಾಯಕರ ಭೇಟಿಗೆ ಹೋಗಿದ್ದಾರೆ ಎಂದರು.
ಮುಡಾ ಹಗರಣ ಕೇವಲ 14 ನಿವೇಶನಕ್ಕೆ ಸೀಮಿತವಾದದ್ದಲ್ಲ. 5 ಸಾವಿರ ಕೋಟಿಗೂ ಮೀರಿದ ಸಾವಿರಾರು ನಿವೇಶನಗಳ ಬಹುದೊಡ್ಡ ಹಗರಣವಾಗಿದೆ. ಸಿಎಂ ತವರು ಜಿಲ್ಲೆಯಲ್ಲಿ ಬಡವರನ್ನು ತಲುಪಬೇಕಿದ್ಧ 5 ಸಾವಿರ ಕೋಟಿ ಬೆಲೆ ಬಾಳುವ ಸಾವಿರಾರು ಮುಡಾ ನಿವೇಶನಗಳು ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಕಾಂಗ್ರೆಸ್ ನಾಯಕರ ಪಾಲಾಗಿವೆ. ಸಿದ್ದರಾಮಯ್ಯನವರು ಪತ್ನಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ 14 ನಿವೇಶನ ಪಡೆದಿದ್ದಾರೆ ಎಂದರು.
ಈ ಮಧ್ಯೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾವು ಬಂಡೆಗಲ್ಲಿನಂತೆ ಯಾವಾಗಲೂ ಸಿದ್ದು ಹಿಂದೆ ಇರುವುದಾಗಿ ಪದೇ, ಪದೇ ಹೇಳುತ್ತಿದ್ದಾರೆ. ಇವೆಲ್ಲವೂ ಸಿಎಂ ಬದಲಾವಣೆ ವಿಚಾರಕ್ಕೆ ಪುಷ್ಠಿ ನೀಡಿವೆ. ಹೀಗಾಗಿ, ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ ಎಂದು ಭವಿಷ್ಯ ನುಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಎಸ್ಐಟಿ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಮಾಜಿ ಸಚಿವ ನಾಗೇಂದ್ರ ಮತ್ತು ಬಸವರಾಜ ದದ್ದಲ್ ಹೆಸರಿಲ್ಲ. ಹೀಗಾಗಿ, ವಾಲ್ಮೀಕಿ ಮತ್ತು ಮುಡಾ ಹಗರಣ ಎರಡರಲ್ಲೂ ಎಸ್ಐಟಿ ತನಿಖೆಯಿಂದ ನ್ಯಾಯ ನಿರೀಕ್ಷೆ ಅಸಾಧ್ಯ. ಎರಡೂ ಪ್ರಕರಣಗಳ ತನಿಖೆ ಸಿಬಿಐನಿಂದಲೇ ಆಗಲಿ ಎಂದು ಒತ್ತಾಯಿಸಿದರು.