ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು ಮೂಡಾ ಹಗರಣದ ನೈತಿಕ ಹೊಣೆ ಹೊತ್ತು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನೈತಿಕತೆಯ ಪ್ರಜ್ಞೆಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು ನೀತಿ ಮತ್ತು ನ್ಯಾಯದ ಹಾದಿಯನ್ನು ಬಿಟ್ಟು ಎಷ್ಟು ದೂರ ಹೋದರೂ, ಒಂದು ದಿನ ಬಂದು ಸತ್ಯದ ಎದುರು ಶರಣಾಗಬೇಕಾಗುತ್ತದೆ. ಸಿದ್ದರಾಮಯ್ಯ ಅವರ ನಿವೇಶನ ಹಿಂದಿರುಗಿಸುವ ನಿರ್ಧಾರಕ್ಕೆ “ಕತ್ತಲು ಕಟ್ಟಿ ಹೋದ ಮೇಲೆ ದೀಪ ಹಚ್ಚಿದಂತೆ” ಎಂಬ ಗಾದೆ ನಿಖರವಾಗಿ ಅನ್ವಯಿಸುತ್ತದೆ ಎಂದಿದ್ದಾರೆ.
ಒಳ್ಳೆಯದ್ದನ್ನು ಮಾಡಬೇಕಾದ ಸಮಯವು ಕಳೆದುಹೋದ ಮೇಲೆ ಬಂದ ಜ್ಞಾನ, ಅನಿವಾರ್ಯವಾಗಿ ಪಶ್ಚಾತ್ತಾಪವನ್ನೇ ತರುತ್ತದೆ ಎಂಬುದು ಮಾನ್ಯ ಸಿದ್ದರಾಮಯ್ಯ ರವರ ನಡೆಯಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಅವರ ತಪ್ಪುಗಳನ್ನು ಒಪ್ಪಿಕೊಳ್ಳದೆ, ಬಿಜೆಪಿ ಮೇಲೆ ನಿರಂತರ ಆರೋಪ ಮಾಡಿ, ಗೌರವಾನ್ವಿತ ರಾಜ್ಯಪಾಲರನ್ನು ಮತ್ತು ಅವರ ಹುದ್ದೆಯನ್ನು ಅಪಮಾನಿಸುವಂತ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡಿ, ನಮ್ಮ ಪಕ್ಷದ ಮೈಸೂರು ಚಲೋ ಪಾದಯಾತ್ರೆಗೆ ಪರ್ಯಾಯವಾಗಿ ಭಂಡತನ ಪ್ರದರ್ಶಿಸಿ, ಅಬ್ಬರಿಸಿ, ಬೊಬ್ಬಿರಿದು ಕಪ್ಪು ಚುಕ್ಕೆ ಇಲ್ಲ ನನ್ನಲ್ಲಿ ಎಂಬಂತಹ ಅಪಹಾಸ್ಯದ ಹೇಳಿಕೆಗಳನ್ನು ನೀಡಿ, ಕೊನೆಗೆ ಹೋದ ಮೇಲೆ ನೀರಲ್ಲಿ ಹೋಮ ಎಂಬ ಗಾದೆಯ ಮಾತಿನಂತೆ ಸೈಟ್ ಗಳನ್ನು ಹಿಂದಿರುಗಿಸಲು ನಿರ್ಧಾರ ಪ್ರಕಟಿಸಿರುವುದು ತಮ್ಮ ತಪ್ಪನ್ನು ಸ್ಪಷ್ಟವಾಗಿ ಒಪ್ಪಿಕೊಂಡ ಹಾಗೆ ಅನಿಸುತ್ತದೆ. ಅವರ ಈ ನಡೆ ಕೇವಲ ಕಾನೂನಿನ ಬಂಧನದಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನವೇ ಹೊರತು, ನೈತಿಕ ಜವಾಬ್ದಾರಿ ಹೊತ್ತಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಸಿದ್ಧರಾಮಯ್ಯ ಅವರ ನಿರ್ಧಾರಗಳು ಮತ್ತು ನಡೆಗಳನ್ನು ಗಮನದಲ್ಲಿಟ್ಟುಕೊಂಡರೆ, ಅವರು ಇದೀಗ ಮೂಡಾ ಹಗರಣದ ನೈತಿಕ ಹೊಣೆ ಹೊತ್ತು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನೈತಿಕತೆಯ ಪ್ರಜ್ಞೆಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದಿದ್ದಾರೆ.
ವಿದ್ಯಾರ್ಥಿಗಳ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯ ಹೆಚ್ಚಳಕ್ಕೆ ಸರ್ಕಾರ ಒತ್ತು: ಸಚಿವ ಮಧು ಎಸ್ ಬಂಗಾರಪ್ಪ
BREAKING : ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ : 17 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ!