ಮಂಗಳೂರು : ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದ್ದು, ರಾಜ್ಯಪಾಲರ ಆದೇಶ ಸರಿ ಎಂದು ತೀರ್ಪು ನೀಡದ ಬೆನ್ನಲ್ಲೇ ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ಕೂಡ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಈ ಕುರಿತು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಸಲಹೆ ನೀಡಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದ್ದರು. ಅಪಘಾತ ಮಾಡಿ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಕೊಡಬೇಕು ಬೇಡವೋ ಎನ್ನುವುದು ಅವರಿಗೆ ಬಿಟ್ಟಿದ್ದು. ಆದರೆ ಇಂತಹ ಗಂಭೀರ ಆರೋಪ ಬಂದಾಗ ರಾಜೀನಾಮೆ ಕೊಡಬೇಕು ಹೈಕೋರ್ಟ್ ಸಹ ಮೇಲ್ನೋಟಕ್ಕೆ ಪುರಾವೆ ಇದೆ ಅಂತ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಹಾಗಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆನಿಸುತ್ತಿದೆ. ರಾಜೀನಾಮೆ ಕೊಡುವುದು ಸಿದ್ದರಾಮಯ್ಯಗೆ ಬಿಟ್ಟದ್ದು. ಯಾವ ತನಿಖಾ ಸಮಿತಿ ಉತ್ತಮವೆಂದು ಹೇಳಲ್ಲ, ಸರ್ಕಾರಕ್ಕೆ ಬಿಟ್ಟ ವಿಚಾರ. ಯಾವುದೇ ತನಿಖಾ ಸಮಿತಿ ವಿಚಾರಣೆ ಮಾಡಬಹುದು. ಅವರು ಆರೋಪಿಯಲ್ಲವೆಂದು ತೀರ್ಪು ಬಂದರೆ ಮತ್ತೆ ಹುದ್ದೆ ಅಲಂಕರಿಸಲಿ. ಹೈಕೋರ್ಟ್ ತೀರ್ಪಿಗೂ ಮುನ್ನ ನಾನು ತಪ್ಪೇ ಮಾಡಿಲ್ಲವೆಂದು ಹೇಳಿದ್ದರು. ಈಗ ಕೋರ್ಟ್ ಮೇಲ್ನೋಟಕ್ಕೆ ತಪ್ಪು ಕಂಡುಬಂದಿದೆ ಎಂದು ಹೇಳಿದೆ. ಸದ್ಯ ಅವರು ಹೇಳಿದ್ದು ಸರಿಯಿಲ್ಲವೆಂದು ಆಯ್ತಲ್ಲ ಎಂದಿದ್ದಾರೆ.