ಹುಬ್ಬಳ್ಳಿ : ಟಗರು ಟಗರು ಅಂತರಲ್ಲ ಅದು ಸಿಎಂ ಸಿದ್ದರಾಮಯ್ಯರ ಮೇಲೆ ಪ್ರೀತಿ ಅಲ್ಲ. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿಲ್ಲ ಅವರ ಒಳ್ಳೆಯತನವನ್ನು ಹೊಗಳುಭಟ್ಟರು ಹಾಳು ಮಾಡಿದ್ದಾರೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಳ್ಳೆಯ ಮನುಷ್ಯ. ಭ್ರಷ್ಟಾಚಾರ ಮಾಡಿದವನಲ್ಲ. ದುಡ್ಡು ಮಾಡಬೇಕಿದ್ದರೇ ಈ ಹಿಂದೆ ಅಧಿಕಾರದ ಅವಧಿಯಲ್ಲಿಯೇ ಸಾಕಷ್ಟು ಮಾಡ್ತಿದ್ದರು. ಆದರೆ, ಅಂತಹ ಕಾರ್ಯಕ್ಕೆ ಕೈ ಹಾಕಿಲ್ಲ ಅವರ ಒಳ್ಳೆಯತನವನ್ನು ಹೊಗಳುಭಟ್ಟರು ಹಾಳು ಮಾಡಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಮುಡಾ (ಮೈಸೂರಿನ ನಗಾರಭಿವೃದ್ಧಿ ಪ್ರಾಧಿಕಾರ) ಪ್ರಕರಣ ಈಗ ಕೋರ್ಟ್ನಲ್ಲಿದೆ. ಬಿಜೆಪಿಯವರು ಏನಾದರೂ ದಾಖಲೆಗಳಿದ್ದರೆ ಕೋರ್ಟ್ ಮುಂದೆ ಇಡಬೇಕು. ಕೋರ್ಟ್ ತೀರ್ಮಾನ ಮಾಡುತ್ತದೆ. ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೇ ಕಾಂಗ್ರೆಸ್ ಟೀಕೆ ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ ಎಂದು ಅವರು ಹೇಳಿದರು.
ನೈತಿಕತೆ ಇದ್ದರೆ ಬಿಜೆಪಿ ನಾಯಕರು ರಾಜೀನಾಮೆ ಕೊಡಬೇಕಿತ್ತು. ರಾಜ್ಯದಲ್ಲಿ ವಿರೋಧ ಪಕ್ಷ ವಿರೋಧಪಕ್ಷದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ, ನಿರುದ್ಯೋಗ, ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಮಾತನಾಡದೇ ಬಿಜೆಪಿಯವರು ಬೇರೆಯದೇ ಕೆಲಸ ಮಾಡುತ್ತಿದ್ದಾರೆ.ನಿಮ್ಮ ಅಧಿಕಾರದ ಅವಧಿಯಲ್ಲಿ ನೀವು ಏನು ಮಾಡಿ ಬಂದಿದ್ದೀರಾ? ನಿಮ್ಮ ಮನವ ಸಂತೈಸಿಕೊಳ್ಳಿ ಎಂದು ಇಬ್ರಾಹಿಂ ಲೇವಡಿ ಮಾಡಿದರು.