ಬೆಂಗಳೂರು : ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಸಂಸದ ಡಾ. ಕೆ ಸುಧಾಕರ್ ತೀವ್ರ ವಾಗ್ದಾಳಿ ನಡೆಸಿದ್ದರು. ನನ್ನನ್ನು ರಾಜಕೀಯವಾಗಿ ಮುಗಿಸಲು ವಿಜಯೇಂದ್ರ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿ ವೈ ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಈ ಬಚ್ಚಾ ನಿಂದ ನಾವು ಕಲಿಬೇಕಾ ನಮ್ಮನ್ನು ಪಕ್ಷದಿಂದ ಹೊರಗೆ ಹಾಕಿದರೆ ಹಾಕಿ ಎಂದು ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರೇ ಅಧ್ಯಕ್ಷ ಘೋಷಣೆ ಮಾಡಲಿ. ಚುನಾವಣೆ ಯಾಕೆ ಬೇಕು? ವಿಜಯೇಂದ್ರ ಚಡ್ಡಿ ಹಾಕೋ ಮುನ್ನ ನಾನು ಸಂಘಟನೆ ಮಾಡಿದ್ದೇನೆ. ವಿಜಯೇಂದ್ರ ಬಚ್ಚಾ, ನಾವು ಅವನಿಂದ ಕಲಿಯಬೇಕಿಲ್ಲ.ನಮಗೆ ಯಾವುದೇ ಭಯ ಇಲ್ಲ. ಪಕ್ಷದಿಂದ ತೆಗೆದು ಹಾಕ್ತೀರಾ ಹಾಕಲಿ. ನಾವು ಹೆದರೊಲ್ಲ ಎಂದು ಸವಾಲು ಹಾಕಿದರು.
ವಿಜಯೇಂದ್ರ ಅವರ ಒರಿಜಿನಲ್ ಬಣ್ಣ ಹೊರಗೆ ಬಂದಿದೆ. ವಿಜಯೇಂದ್ರ ಯಾಕೆ ಸರ್ಕಸ್ ಮಾಡ್ತಿದ್ದೀರಾ ಚುನಾವಣೆ ಅಂತ. ರಾಧಾಮೋಹನ್ಗೆ ಹೇಳಿ ರಾಜ್ಯಾಧ್ಯಕ್ಷ ನೀವೇ ಅಂತ ಕೈ ಎತ್ತಿಸಿಕೊಳ್ಳಿ. ಸಂಸದ ಸುಧಾಕರ್ ಮಾತ್ರವಲ್ಲ. ರಾಜ್ಯದ ಹಿರಿಯ ನಾಯಕರಿಗೆ ಜಿಲ್ಲಾ ಅಧ್ಯಕ್ಷ ಆಯ್ಕೆ ಬಗ್ಗೆ ಅಸಮಾಧಾನ ಇದೆ. ಇದೇನು ಪ್ರೈವೇಟ್ ಕಂಪನಿನಾ. ಎಲ್ಲ ನೀವೇ ಮಾಡಿಕೊಳ್ಳೋದಾದ್ರೆ ಮಾಡಿಕೊಳ್ಳಿ. ಅಣ್ಣ ಕೇಂದ್ರ ಮಂತ್ರಿಯಾಗಲಿ, ನಿಮ್ಮ ಅಪ್ಪ ರಾಷ್ಟ್ರಪತಿ ಆಗಲಿ ಅಂತ ಕಿಡಿಕಾರಿದರು.
ನಿನ್ನೆ ಮಾಡಿರೋ ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಯಡಿಯೂರಪ್ಪ-ರಾಘವೇಂದ್ರ ಬಿಟ್ಟು ಇನ್ಯಾರಿಗೂ ಅಧ್ಯಕ್ಷರ ಸ್ಥಾನ ಪಟ್ಟಿ ಇಷ್ಟ ಆಗಿಲ್ಲ. ಹೀಗೆ ಆದರೆ ಪಕ್ಷ ಕಟ್ಟಲು ಸಾಧ್ಯವಿಲ್ಲ. ಮಾಜಿ ಕೆಜೆಪಿ ಒಳಗೆ ಇರೋರಿಗೆ, ಹೊಗಳು ಭಟ್ಟರಿಗೆ, ಅಡ್ಜೆಸ್ಟ್ಮೆಂಟ್ ಮಾಡೋರಿಗೆ ಸ್ಥಾನಮಾನ ಕೊಡ್ತಿದ್ದಾರೆ.ನಾಳೆ ಸಭೆ ಮಾಡ್ತಿದ್ದೇವೆ. ಸಭೆ ಎರಡು ಹಂತದಲ್ಲಿ ಆಗುತ್ತದೆ. ತಟಸ್ಥ ಪರಿವರ್ತನೆ ಆಗಿ ನಿಷ್ಠಾವಂತ ಆಗಿದೆ. ನಾಳೆ ಕೂತು ಚರ್ಚೆ ಮಾಡ್ತೀವಿ. ಈ ಅಧ್ಯಕ್ಷರನ್ನ ಒಪ್ಪೋಕೆ ಸಾಧ್ಯವಿಲ್ಲ ಎಂದರು.