ಬೆಂಗಳೂರು : ಕೆಆರ್‌ಎಸ್ ಡ್ಯಾಂನಿಂದ ರೈತರ ಹೆಸರಿನಲ್ಲಿ ತಮಿಳುನಾಡಿಗೆ ನೀರು ಹರಿಸಲಾಗಿದೆ. ನೀರು ಬಿಟ್ಟು ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ. ನೀರು ಬಿಟ್ಟಿದ್ದಕ್ಕೆ ಶಹಬ್ಬಾಶ್‍ಗಿರಿ ಕೊಡಲು ಹೋಗಬೇಕಿತ್ತಾ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನಿನ್ನೆ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಗೆ HD ಕುಮಾರಸ್ವಾಮಿ ಅವರು ಗೈರಾಗಿದ್ದರು. ಈ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಈ ವೇಳೆ ಸಿಡಬ್ಲ್ಯೂಆರ್‌ಸಿ ಶಿಫಾರಸು ಹಿನ್ನೆಲೆ ಸಭೆ ಕರೆದಿದ್ದರು. ಯಾವ ವಿಚಾರ ಚರ್ಚಿಸಲು ಅವರು ಸಭೆ ಕರೆದಿದ್ದರು? ಚರ್ಚೆಗೂ ಮುನ್ನವೇ ತಮಿಳುನಾಡಿಗೆ ನೀರು ಹರಿದು ಹೋಗಿದೆ. ಕಬಿನಿಯಿಂದ ನೀರು ಹರಿದಿದೆ. ಸಭೆಯಲ್ಲಿ ಕೊಡುವ ಗೊಡಂಬಿ, ಬಾದಾಮಿ ತಿನ್ನೋಕೆ ಹೋಗಬೇಕಿತ್ತಾ? ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ಜನತಾ ದರ್ಶನ ಮಾಡಿದರೆ, ಅಧಿಕಾರಿಗಳು ಭಾಗಿಯಾಗಬಾರದು ಎಂದು ಆದೇಶ ಮಾಡಿದ್ದಾರೆ. ಅಧಿಕಾರಿಗಳ ಸಭೆ ನಡೆಸಬಾರದು ಎಂದು ಆದೇಶ ಮಾಡಿದ ಮೇಲೆ ನಮ್ಮಿಂದ ಏನು ಬಯಸುತ್ತೀರಾ? ಪಾಂಡವಪುರದಲ್ಲಿ ಮತ ಕೊಟ್ಟ ಜನರಿಗೆ ಧನ್ಯವಾದ ಹೇಳಬೇಕಿತ್ತು ಹೋಗಿದ್ದೆ. ಯಾವ ಸಂದರ್ಭದಲ್ಲಿ ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ನನಗೆ ಗೊತ್ತಿದೆ. ನಾನು ಇವರ ಅನುಮತಿ ಪಡೆಯಬೇಕಾ? ಎಂದು ಕಿಡಿಕಾರಿದ್ದಾರೆ.
ಯಾಕೆ ಸಭೆ ಮಾಡಿದ್ದೀರಿ? ಏನು ನಿರ್ಧಾರ ಮಾಡಿದ್ದೀರಿ? ಸಭೆ ಮಾಡಿದ ಮೇಲೂ ಕಡಿಮೆ ಪ್ರಮಾಣದ ನೀರು ಬಿಡಲು ಒಪ್ಪಿಗೆ ಸೂಚಿಸಿದೆ. ತೆಲಂಗಾಣಕ್ಕೆ ಹೋದರೆ ಅಲ್ಲಿ ಸಿಎಂ ಫೋನ್ ಮಾಡಿ ಸಹಕಾರ ಕೇಳ್ತಾರೆ. ಆದರೆ ನಾನು ರಾಜ್ಯದ ಯೋಜನೆಗಳಿಗೆ ಸಹಿ ಹಾಕಿದರೆ ಅದನ್ನು ನಿಲ್ಲಿಸುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.