ಕಲಬುರ್ಗಿ : ಲಿವಿಂಗ್ ಟೂಗೆದರ್ ಸಂಬಂಧಕ್ಕೆ ಕುಟುಂಬಸ್ಥರು ವಿರೋಧ ಮಾಡಿದ್ದಕ್ಕೆ ಯುವಕನೊಬ್ಬ ಮನನೊಂದು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿ ನಗರದ ನಾಗನಹಳ್ಳಿ ರೇಲ್ವೆ ಹಳಿ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಲಬುರಗಿ ತಾಲೂಕಿನ ಕುಮಸಿ ಗ್ರಾಮದ ಶಿವಕುಮಾರ್ (28) ಎಂದು ತಿಳಿದುಬಂದಿದೆ. ಶಿವಕುಮಾರ್ ಮತ್ತು ಆ ಮಹಿಳೆ ಲಿವಿಂಗ್ ಟೂಗೆದರ್ ಸಂಬಂಧದಲ್ಲಿದ್ದರು. ಆದರೆ, ಈ ಸಂಬಂಧಕ್ಕೆ ಶಿವಕುಮಾರ್‌ನ ಕುಟುಂಬದವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ವಿರೋಧದಿಂದ ಮನನೊಂದ ಶಿವಕುಮಾರ್ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆಗೆ ಶರಣಾದನೆಂದು ತಿಳಿದುಬಂದಿದೆ.
ಶಿವಕುಮಾರ್ ಆತ್ಮಹತ್ಯೆಗು ಮುನ್ನ ಮಹಿಳೆಗೆ ಕರೆ ಮಾಡಿದ್ದ. ಈ ಕರೆಯನ್ನು ಸ್ವೀಕರಿಸಿದ ಮಹಿಳೆ, ಶಿವಕುಮಾರ್‌ನನ್ನು ರಕ್ಷಿಸಲು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾಳೆ. ಆದರೆ, ರೈಲ್ವೆ ಹಳಿಯಲ್ಲಿ ರಕ್ಷಣೆಗೆ ಮುಂದಾದಾಗ ಮಹಿಳೆ ಕೂಡ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.ತಕ್ಷಣ ಆಕೆಯನ್ನು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಾಡಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.