ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಯಾವಾಗಲೂ ಒಂದಿಲ್ಲೊಂದು ಕಿರಿಕ್ ಆಗುತ್ತಲೇ ಇರುತ್ತದೆ. ಇದೀಗ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಮಹಿಳೆಯರ ಆಕ್ಷೇಪಾರ್ಹ ವಿಡಿಯೋ ತೆಗೆದು ನೀಚ ಕೃತ್ಯ ಎಸಗಿದ್ದಾನೆ. ಅಪರಿಚಿತ ವ್ಯಕ್ತಿಯ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದೂರು ದಾಖಲಾಗಿದೆ.
ಹೌದು ಬೆಂಗಳೂರಿನ ಮೆಟ್ರೋ ರೈಲಲ್ಲಿ ಆಗಾಗ ಕಿರಿಕ್ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಇದೀಗ ಕಾಮುಕನೊಬ್ಬ ಮಹಿಳೆಯರ ಅರಿವಿಗೆ ಬಾರದಂತೆ ನಿಮ್ಮ ಆಕ್ಷೇಪಾರ್ಹ ಪೋಟೋ, ವಿಡಿಯೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆಯಲು ಮುಂದಾಗಿದ್ದಾರೆ. ಹೀಗೆ ಮೆಟ್ರೋ ನಿಲ್ದಾಣ ಮತ್ತು ರೈಲಿನೊಳಗೆ ಯುವತಿಯರು, ಮಹಿಳೆಯರ ಪೋಟೋ ತೆಗೆದ ಅಪರಿಚಿತ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರ ಅರಿವಿಗೆ ಬಾರದಂತೆ ಅವರ ಆಕ್ಷೇಪಾರ್ಹ ವಿಡಿಯೋಗಳನ್ನ ಚಿತ್ರೀಕರಿಸಿದ ಅಪರಿಚಿತ ವ್ಯಕ್ತಿ, ನಂತರ ಅವುಗಳನ್ನ ತನ್ನ ಇನ್ಸ್ಟಾ ಖಾತೆಯಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆದಿದ್ದಾನೆ. ಮೆಟ್ರೋ ಚಿಕ್ಸ್ ಪೇಜ್ ನಲ್ಲಿ ಈ ಆಕ್ಷೇಪಾರ್ಹ ವಿಡಿಯೋಗಳು ಅಪ್ಲೋಡ್ ಆಗಿದ್ದು, ಸುಮಾರು 13 ವಿಡಿಯೋಗಳನ್ನ ಈ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಬಳಿಕ ಈ ಇನ್ಸ್ಟಾಗ್ರಾಂ ಪೇಜ್ ಗಮನಿಸಿದ ಕೆಲವು ನೆಟ್ಟಿಗರು, ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ವಿಡಿಯೋ ಡಿಲಿಟ್ ಮಾಡಿ ಖಾತೆದಾರನ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಬನಶಂಕರಿ ಪೊಲೀಸರು ಈ ಸಂಬಂಧ ಇನ್ಸ್ಟಾಗ್ರಾಂ ಪೇಜ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.