ಉತ್ತರಪ್ರದೇಶ : ಒಂದು ಮದುವೆ ಎಂದರೆ ಪ್ರತಿಯೊಂದು ಅಚ್ಚುಕಟ್ಟಾಗಿ ನಡೆಯಬೇಕು. ವಧುವಿನ ಕಡೆಯವರಾಗಲಿ ಅಥವಾ ವರನ ಕಡೆಯವರಾಗಲಿ ಒಂದು ಸಣ್ಣ ತಪ್ಪು ಮಾಡಿದರೂ ಸಹ ಎಷ್ಟೋ ಮದುವೆಗಳು ಮುರಿದು ಬಿದ್ದಿರುವ ಘಟನೆ ಕೇಳಿದ್ದೇವೆ. ಈಗ ಉತ್ತರ ಪ್ರದೇಶದಲ್ಲಿ ಕೇವಲ ತಂದೂರಿ ರೊಟ್ಟಿಗಾಗಿ ಗಲಾಟೆ ನಡೆದು ಓರ್ವ ಅಪ್ರಾಪ್ತ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ಕೇವಲ ತಂದೂರಿ ರೊಟ್ಟಿಗಾಗಿ ಪರಸ್ಪರ ಹೊಡೆದಾಟ ನಡೆದಾಗ ಓರ್ವ ಅಪ್ರಾಪ್ತ ಸೇರಿ ಇಬ್ಬರು ಸಾವನಪ್ಪಿದ್ದಾರೆ. ಉತ್ತರ ಪ್ರದೇಶದ ಅಮೇಥಿಯ ಒಂದು ಸಣ್ಣ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.ರವಿಕುಮಾರ್ ಅಲಿಯಾಸ್ ಕಲ್ಲು ಎಂಬ 18 ವರ್ಷದ ಯುವಕ ಮತ್ತು 17 ವರ್ಷದ ಆಶಿಶ್ ನಡುವೆ ತಂದೂರಿ ರೊಟ್ಟಿ ಯಾರು ಮೊದಲು ತೆಗೆದುಕೊಂಡಿದ್ದಾರೆ ಎಂಬ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಪರಸ್ಪರ ಕಬ್ಬಿಣದ ರಾಡ್‍ಗಳಿಂದ ಹೊಡೆದಾಡಿಕೊಂಡಿದ್ದಾರೆ.
ಇದರಿಂದ ಇಬ್ಬರಿಗೂ ತೀವ್ರ ಗಾಯಗಳಾಗಿವೆ. ಅಪ್ರಾಪ್ತ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ರವಿಯನ್ನು ಚಿಕಿತ್ಸೆಗಾಗಿ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.ಮೃತರ ಕುಟುಂಬದವರ ದೂರಿನ ಆಧಾರದ ಮೇಲೆ 13 ಜನರ ವಿರುದ್ಧ ಕೊಲೆ ಮತ್ತು ಗಲಭೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಶವಗಳನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಮತ್ತಷ್ಟು ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.