ತೆಲಂಗಾಣ : ಮನೆಯಲ್ಲಿ ಸೊಳ್ಳೆ ಬತ್ತಿ ಹಚ್ಚಿ ಮಲಗುವವರೇ ಎಚ್ಚರ. ಸುಳ್ಳೆ ಬತ್ತಿ ಕಿಡಿಯಿಂದ ಮನೆಗೆ ಬೆಂಕಿ ಬಿದ್ದು 4 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸೊಳ್ಳೆಗಳನ್ನು ಓಡಿಸಲು ಮನೆಯಲ್ಲಿ ಹಚ್ಚಿದ್ದ ಸೊಳ್ಳೆ ಸುರುಳಿ ಒಬ್ಬ ಬಾಲಕನ ಜೀವವನ್ನೇ ಬಲಿ ತೆಗೆದುಕೊಂಡಿದೆ. ತೆಲಂಗಾಣದ ಹಯತ್‌ನಗರ ಸಿಐ ನಾಗರಾಜುಗೌಡ ಮಾತನಾಡಿ, ಅಬ್ದುಲ್ ಖಾದರ್ ಜಿಲಾನಿ ಅವರು ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಪೆದ್ದ ಅಂಬರಪೇಟೆ ಪುರಸಭೆ ವ್ಯಾಪ್ತಿಯ ಭುವನೇಶ್ವರಿ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಶನಿವಾರ ರಾತ್ರಿ, ಸೊಳ್ಳೆಗಳನ್ನು ದೂರವಿಡಲು ಅವರು ಸೊಳ್ಳೆ ಬತ್ತಿ ಹೆಚ್ಚಿದ್ದಾರೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಾಸಿಗೆಯ ಮೇಲೆ ಸುರುಳಿ ಬಿದ್ದು ಬೆಂಕಿ ಹೊತ್ತಿಕೊಂಡಿತು, ಇಡೀ ಕೋಣೆ ಹೊಗೆಯಿಂದ ತುಂಬಿತ್ತು. ಈ ಅಪಘಾತದಲ್ಲಿ, ಹಾಸಿಗೆಯ ಮೇಲೆ ಮಲಗಿದ್ದ ಬಾಲಕ ಅಬ್ದುಲ್ ರೆಹಮಾನ್ (4) ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಅತಿಫಾ (4) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ನಿಲೋಫರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಬ್ದುಲ್ ಖಾದರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಸೇರಿ ಒಟ್ಟು ನಾಲ್ಕು ಮಕ್ಕಳು. ಹಿರಿಯ ಮಗ ಅರ್ಹಾನ್ ಮತ್ತು ಹಿರಿಯ ಮಗಳು ಆಫಿಯಾ ಹಾಲ್‌ನಲ್ಲಿ ಮಲಗಿದ್ದರು. ಜಿಲಾನಿ, ಅವರ ಪತ್ನಿ ಫೌಜಿಯಾ ಬೇಗಂ, ಅವರ ಕಿರಿಯ ಮಗ ಅಬ್ದುಲ್ ರೆಹಮಾನ್ ಮತ್ತು ಅವರ ಕಿರಿಯ ಮಗಳು ಅತಿಫಾ ಮಲಗುವ ಕೋಣೆಯಲ್ಲಿ ಮಲಗಿದ್ದರು. ಮಾಹಿತಿ ತಿಳಿದ ಕೂಡಲೇ ಹಯಾತ್ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.