ತುಮಕೂರು : ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠ ಶಾಲೆ ಎಂದು ನಾವು ಚಿಕ್ಕವರಿಂದ ನಮ್ಮ ಗುರು ಹಿರಿಯರು ಹೇಳಿ ಕೊಟ್ಟ ದಾರಿಯಲ್ಲಿ ನಡೆದು ಬಂದಿದ್ದೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ಮಗನೊಬ್ಬ ಡ್ರಗ್ಸ್ ಗೆ ಸಂಪೂರ್ಣವಾಗಿ ದಾಸನಾಗಿದ್ದ ಇದರಿಂದ ಬೇಸತ್ತ ತಾಯಿ ಒಬ್ಬರು ಇವನನ್ನು ಜೈಲಿಗೆ ಕಳುಹಿಸಿ ಇಲ್ಲವಾದರೆ ಇವನನ್ನು ಕೊಲ್ಲಲು ನನಗೆ ಅನುಮತಿ ಆದರೂ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.
ಹೌದು ಮಾದಕ ವಸ್ತುಗಳಿಗೆ ತುಮಕೂರಿನ ರೇಣುಕಮ್ಮ ಎನ್ನುವವರ ಮಗ ಅಭಿ ಎನ್ನುವ ಯುವಕ ಡ್ರಗ್ಸ್ ವ್ಯಸನಿಯಾದ ಹಿನ್ನೆಲೆಯಲ್ಲಿ ಬೇಸತ್ತ ತಾಯಿಯೊಬ್ಬರು, ದಯಮಾಡಿ ಪುತ್ರನನ್ನು ಜೈಲಿಗೆ ಹಾಕಿ, ಇಲ್ಲವೇ ಅವನನ್ನು ಸಾಯಿಸಲು ನನಗೆ ಅನುಮತಿ ಕೊಡಿ ಎಂದು ಪೊಲೀಸರನ್ನು ಬೇಡಿಕೊಂಡಿರುವುದು ತುಮಕೂರು ಜಿಲ್ಲೆಯ ತುರುವೇಕರೆಯಲ್ಲಿ ನಡೆದಿದೆ.
ಸಾರ್ ನನ್ ಮಗ ಸರಿಯಿಲ್ಲ. ಗಾಂಜಾ ಹೊಡೀತಾನೆ, ಡ್ರಗ್ಸ್ ತಗೋತಾನೆ, ಸಿಕ್ಕ ಸಿಕ್ಕವರ ಮೇಲೆ ಹೊಡೆದಾಟಕ್ಕೆ ಹೋಗ್ತಾನೆ. ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತಾಡ್ತಾನೆ. ಕೀಟಲೆ ಮಾಡ್ತಾನೆ. ಜನರ ಕೈಲಿ ಒದೆ ತಿಂತಾನೆ. ಅದನ್ನು ನಾನು ನೋಡಕ್ಕೆ ಆಗಲ್ಲ. ಕೈ ಕಾಲು ಮುರಿದು ಹಾಕ್ತಾರೆ. ಜನಗಳು ನಮ್ ಮನೆ ಮುಂದೆ ಬಂದು ಗಲಾಟೆ ಮಾಡ್ತಾರೆ. ಮರ್ಯಾದೆ ಹೋಗ್ತಾ ಇದೆ. ದಯಮಾಡಿ ನನ್ ಮಗನ್ನ ಜೈಲಿಗೆ ಹಾಕಿ. ಇಲ್ಲಾಂದ್ರೆ ನನಗೆ ಅವನನ್ನು ಸಾಯಿಸಕ್ಕೆ ಪರ್ಮಿಷನ್ ಕೊಡಿ. ಇದು ಆ ತಾಯಿಯ ಸಂಕಟದ ಮಾತಾಗಿದೆ.
ಶನಿವಾರ ಮಧ್ಯಾಹ್ನ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕೆಲವು ಬಾಲಕಿಯರನ್ನು ಯುವಕ ಅಭಿ ಚುಡಾಯಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹೀಗಾಗಿ ಅಲ್ಲೇ ಇದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಭಿಯನ್ನು ಹಿಡಿದು ಚೆನ್ನಾಗಿ ಥಳಿಸಿ, ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ನಡುವೆ ಇದೇ ಅಭಿ, ಈ ಹಿಂದೆ ಪಟ್ಟಣದಲ್ಲಿ ಯುವತಿಗೆ ಜೀವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೋಲಿಸ್ ಠಾಣೆಗೆ ತೆರಳಿದ್ದ ತಾಯಿ ರೇಣುಕಮ್ಮಗೆ ಧೈರ್ಯ ತುಂಬಿರುವ ಸಬ್ ಇನ್ಸ್ ಪೆಕ್ಟರ್ ಪಾಂಡು ಅವರು, ಯುವಕ ವ್ಯಸನಮುಕ್ತವಾಗಲು ಸಹಕಾರ ನೀಡುತ್ತೇವೆ. ಆತನಿಗೆ ನಿಮ್ಹಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ನೆರವು ನೀಡುವುದಾಗಿ ರೇಣುಕಮ್ಮಗೆ ಭರವಸೆ ನೀಡಿದ್ದಾರೆ. ಸದ್ಯ ಯುವಕನನ್ನು ತುರುವೇಕೆರೆ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.