ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ದೀಪಾವಳಿ ಹಬ್ಬದಂದೆ ಘೋರವಾದ ದುರಂತ ನಡೆದಿದ್ದು, ಹಬ್ಬಕ್ಕಾಗಿ ರೆಸ್ಟೋರೆಂಟ್ ಮುಂಭಾಗದಲ್ಲಿ ತಳಿರುತೋರಣ ಕಟ್ಟಲು ಹೋದ ಯುವಕನಿಗೆ ವಿದ್ಯುತ್ ಸ್ವರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿಯ ಡಿ.ಕೆ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಶನಿವಾರ ಬೆಳಗ್ಗೆ 11.30ರ ಸಮಯದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ನೇಪಾಳ ಮೂಲದ ಪದಮ್ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಡಿ.ಕೆ.ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಆಡುಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ರೆಸ್ಟೋರೆಂಟ್ನಲ್ಲಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿತ್ತು. ಹಬ್ಬಕ್ಕೆ ಪದಮ್ ರೆಸ್ಟೋರೆಂಟ್ ಮುಂಭಾಗದಲ್ಲಿ ಮಾವಿನ ತಳಿರುತೋರಣ ಕಟ್ಟಲು ಮುಂದಾಗಿದ್ದಾನೆ. ಮುಂಭಾಗದಲ್ಲಿದ್ದ ಪಾನ್ ಶಾಪ್ ಮೇಲೆ ಹತ್ತಿದ ಆತನಿಗೆ ತಲೆ ಮೇಲೆ ಹಾದು ಹೋಗಿದ್ದ ವಿದ್ಯುತ್ ಲೈನ್ ತಗುಲಿದೆ. ವಿದ್ಯುತ್ ಸ್ವರ್ಶದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅವಘಡದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.








