ತುಮಕೂರು : ತುಮಕೂರು ಜಿಲ್ಲೆಯ ಗೃಹ ಸಚಿವ ಜಿ ಪರಮೇಶ್ವರ್ ಅವರ ಮತಕ್ಷೇತ್ರ ಕೊರಟಗೆರೆಯಲ್ಲಿ ರಸ್ತೆಯ 3 ಕಿಲೋಮೀಟರ್ ಉದ್ದಕ್ಕೂ ಶವದ ತುಂಡುಗಳು ಪತ್ತೆಯಾಗಿದ್ದವು. ಇದೀಗ ಈ ಒಂದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊನೆಗೂ ಪೊಲೀಸರು ಶವದ ಜಾಡು ಹಿಡಿದು ಹೊರಟಾಗ ಸಹಜವಾಗಿ ಶಾಕ್ ಗೆ ಒಳಗಾಗಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಿ ಮೃತ ದೇಹ ತುಂಡರಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಲಕ್ಷ್ಮೀದೇವಮ್ಮಳ ಅಳಿಯನೇ ಈ ಕೃತ್ಯ ನಡೆಸಿರೋದು ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ದಂತ ವೈದ್ಯನಾಗಿರುವ ಡಾ. ರಾಮಚಂದ್ರ ತನ್ನ ಸ್ನೇಹಿತ ಸತೀಶ್ ಹಾಗೂ ಕಿರಣನ ಜೊತೆ ಸೇರಿ ಹತ್ಯೆ ಮಾಡಿದ್ದಾನೆ.
ಕೋಳಾಲದಲ್ಲಿ ಇರುವ ಸ್ನೇಹಿತ ಸತೀಶ್ ಎಂಬಾತನ ಫಾರ್ಮ್ ಹೌಸ್ನಲ್ಲಿ ಕೊಲೆ ಮಾಡಿ ದೇಹದ ಭಾಗಗಳನ್ನು ಪೀಸ್ ಪೀಸ್ ಮಾಡಿ ಎಸೆಯಲಾಗಿತ್ತು. ಬಳಿಕ ಆರೋಪಿಗಳು ಧರ್ಮಸ್ಥಳ ಯಾತ್ರೆಗೆ ಹೋಗಿದ್ದರು. ಅತ್ತೆಯ ಕೊಲೆ ಆದರೂ ಅಳಿಯ ಸ್ಥಳದಲ್ಲಿ ಇಲ್ಲದಿರುವುದಕ್ಕೆ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕೊರಟಗೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ಬಳಿ ರಸ್ತೆಯುದ್ದಕ್ಕೂ ಕವರ್ ನಲ್ಲಿ ಶವದ ತುಂಡುಗಳು ಪತ್ತೆಯಾಗಿತ್ತು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಕೊರಟಗೆರೆಯ ಕೋಳಾಲದ ಮುತ್ಯಾಲಮ್ಮ ದೇವಾಲಯದ ಬಳಿಯಿರುವ ರಸ್ತೆಯಲ್ಲಿ ಐದು ಕಡೆ ಮೃತದೇಹದ ತುಂಡುಗಳು ಪತ್ತೆಯಾಗಿತ್ತು. 3 ಕಿ.ಮೀ ಅಂತರದಲ್ಲಿ 5 ಕಡೆಗಳಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದು, ಮೃತದೇಹದ ತುಂಡುಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದರು.