ಬೆಂಗಳೂರು : ಬೆಂಗಳೂರು ರಾಜ್ಯದ ಗರ್ಭಿಣಿಯನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಕರೆದೊಯ್ದು ಭ್ರೂಣ ಹತ್ಯೆ ಮಾಡಿಸುವ ಪ್ರಕರಣವನ್ನು ಆರೋಗ್ಯ ಇಲಾಖೆಯು ರಹಸ್ಯ ಕಾರ್ಯಾಚರಣೆ ಮೂಲಕ ಭೇದಿಸಿದೆ.
ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದ್ದು, ಮಳವಳ್ಳಿಯ 30 ವರ್ಷದ ಮಹಿಳೆಗೆ 3 ಜನ ಹೆಣ್ಣುಮಕ್ಕಳಿದ್ದ ಹಿನ್ನೆಲೆಯಲ್ಲಿ ಅಕ್ರಮವಾಗಿ ಏಜೆಂಟ್ ಮೂಲಕ ಲಿಂಗಪತ್ತೆ ಮಾಡಿದ್ದರು. ಮತ್ತೆ ಹೆಣ್ಣು ಅಂತಾ ಗೊತ್ತಾದಾಗ, ಐದು ತಿಂಗಳ ಗರ್ಭಿಣಿಯಾಗಿದ್ದರೂ, ಆಂಧ್ರ ಪ್ರದೇಶದ ಏಜೆಂಟ್ ಮೂಲಕ ಭ್ರೂಣ ಹತ್ಯೆಗೆ ಮುಂದಾಗಿದ್ದನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡಮುರು ತಾಲ್ಲೂಕಿನ ಬಾಷಾ ನರ್ಸಿಂಗ್ ಹೋಂ ಮೇಲೆ ಕರ್ನಾಟಕ ಮತ್ತು ಆಂಧ್ರದ ವೈದ್ಯರ ತಂಡ ಕಾರ್ಯಾಚರಣೆ ನಡೆಸಿದಾಗ, ಭ್ರೂಣ ಹತ್ಯೆ ನಡೆಸುತ್ತಿರುವುದು ಖಚಿತಪಟ್ಟಿದೆ.
ಈ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಸರ್ಕಾರ, ಇಲಾಖೆಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜ ಈ ಬಗ್ಗೆ ಜಾಗೃತವಾಗುವುದು ಮುಖ್ಯ. ಸಂಪೂರ್ಣವಾಗಿ ಹೆಣ್ಣು ಭ್ರೂಣ ಹತ್ಯೆ ತೊಡೆದು ಹಾಕಲು ಸಾಮಾಜಿಕ ಬದಲಾವಣೆ ಮುಖ್ಯ ಎಂದಿದ್ದಾರೆ.