ಉಡುಪಿ : ನಗರದಲ್ಲಿ ಆಯೋಜನೆಗೊಂಡಿದ್ದ ಪೊಲೀಸ್ ಮ್ಯಾರಥಾನ್ ವೇಳೆ PSI ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ (58) ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ – ನಮ್ಮ ಪೊಲೀಸ್ ನಮ್ಮ ಹೆಮ್ಮೆ, ಎಲ್ಲರಿಗೂ ಫಿಟ್ನೆಸ್, ಡ್ರಗ್ಸ್ ಫ್ರೀ ಕರ್ನಾಟಕ ಎಂಬ ಧ್ಯೇಯದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ ಭಾನುವಾರ 5 ಕಿ.ಮೀ ಮ್ಯಾರಥಾನ್ ಓಟ ಆಯೋಜಿಸಿತ್ತು. ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಮ್ಯಾರಥಾನ್ ವೇಳೆ ನಾಸೀರ್ ಹುಸೇನ್ ಅವರು, ಜೋಡುಕಟ್ಟೆಯ ಟಿ.ಎಂ.ಎ. ಪೈ ಆಸ್ಪತ್ರೆ ಎದುರು ಏಕಾಏಕಿ ಕುಸಿದು ಬಿದ್ದರು. ತಕ್ಷಣವೇ ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ನಾಸಿರ್ ಅವರ ಹಠಾತ್ ನಿಧನದಿಂದ ಕುಟುಂಬಸ್ಥರ ಆಕ್ರಂದನ ಇದೀಗ ಮುಗಿಲುಮುಟ್ಟಿದೆ.








