ಫ್ರಿಡ್ಜ್ನಲ್ಲಿ ಇಟ್ಟಿದ್ದ ಚಿಕನ್ ಅನ್ನು ಬಿಸಿ ಮಾಡಿ ತಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಕುಟುಂಬದ ಇತರ ಏಳು ಸದಸ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೆಲಂಗಾಣದ ವನಸ್ಥಲಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂತಲಕುಂಟದಲ್ಲಿ ನಡೆದ ಈ ಘಟನೆಯು ಸಂಚಲನ ಮೂಡಿಸಿದೆ. ಪೊಲೀಸರ ಪ್ರಕಾರ, ಚಿಂತಲಕುಂಟ ಆರ್ಟಿಸಿ ಕಾಲೋನಿಯ ನಿವಾಸಿ ಶ್ರೀನಿವಾಸ್ ಯಾದವ್ (46) ಭಾನುವಾರ ಬೋನಾಲ ಹಬ್ಬದ ಸಂದರ್ಭದಲ್ಲಿ ಮಟನ್ ಮತ್ತು ಕೋಳಿ ಮಾಂಸವನ್ನು ಮನೆಗೆ ತಂದರು.
ರಾತ್ರಿಯಲ್ಲಿ ಅವುಗಳನ್ನು ಬೇಯಿಸಿ ತಿಂದರು. ಉಳಿದದ್ದನ್ನು ಫ್ರೀಜರ್ನಲ್ಲಿ ಇಟ್ಟರು. ಮರುದಿನ, ಅವುಗಳನ್ನು ಫ್ರೀಜರ್ನಿಂದ ಹೊರತೆಗೆದು, ಬಿಸಿ ಮಾಡಿ ಮತ್ತೆ ತಿಂದರು.
ಉಳಿದ ಚಿಕನ್ ಫ್ರಿಡ್ಜ್’ನಲ್ಲಿಟ್ಟು ಸೋಮವಾರ ಮತ್ತೆ ಬಿಸಿ ಮಾಡಿದ್ದರು. ಆದರೆ, ಆಹಾರ ವಿಷಕಾರಿಯಾಗಿದ್ದರಿಂದ ಕುಟುಂಬದ ಎಲ್ಲ ಸದಸ್ಯರು ವಾಂತಿ ಮತ್ತು ಭೇದಿ ಶುರುವಾಗಿದೆ. ಇದರಿಂದಾಗಿ, ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಮಂಗಳವಾರ ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟ ಕಾರಣ ಶ್ರೀನಿವಾಸ್ ಯಾದವ್ ನಿಧನರಾದರು. ಉಳಿದ ಏಳು ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಘಟನೆ ಸ್ಥಳೀಯವಾಗಿ ಕೋಲಾಹಲಕ್ಕೆ ಕಾರಣವಾಯಿತು. ಆಹಾರ ವಿಷದಿಂದ ಈ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿತ್ತು.