ಜೈಪುರ: ರಾಜಸ್ಥಾನದಲ್ಲಿ ದಲಿತ ಸಮುದಾಯದ 9 ವರ್ಷದ ಬಾಲಕನೊಬ್ಬ ಶಿಕ್ಷಕನಿಗಾಗಿ ಮೀಸಲಿಟ್ಟಿದ್ದ ಮಡಕೆಯಿಂದ ನೀರು ಕುಡಿದಿದ್ದಕ್ಕಾಗಿ ತನ್ನ ಶಾಲಾ ಶಿಕ್ಷಕನಿಂದ ಥಳಿಸಲ್ಪಟ್ಟು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಪೊಲೀಸರು ಶಿಕ್ಷಕನನ್ನು ಬಂಧಿಸಿ ಕೊಲೆ ಆರೋಪ ಹೊರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಲೋರ್ ಜಿಲ್ಲೆಯ ಸೈಲಾ ಗ್ರಾಮದ ಖಾಸಗಿ ಶಾಲೆಯಲ್ಲಿ ಜುಲೈ 20 ರಂದು ಈ ಘಟನೆ ನಡೆದಿದೆ. ಕಣ್ಣು ಮತ್ತು ಕಿವಿಯಲ್ಲಿ ಗಾಯಗೊಂಡಿದ್ದ ಮಗುವನ್ನು ಚಿಕಿತ್ಸೆಗಾಗಿ ಸುಮಾರು 300 ಕಿ.ಮೀ ದೂರದಲ್ಲಿರುವ ಅಹಮದಾಬಾದ್ ಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಡೆಯಲು ಈ ಪ್ರದೇಶದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸುತ್ತಾ, ಪ್ರಕರಣದ ತ್ವರಿತ ತನಿಖೆಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ‘ಸಂತ್ರಸ್ತೆಯ ಕುಟುಂಬಕ್ಕೆ ಆದಷ್ಟು ಬೇಗ ನ್ಯಾಯ ದೊರಕಿಸಿಕೊಡಲಾಗುವುದು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕುಟುಂಬಕ್ಕೆ ₹ 5 ಲಕ್ಷ ನೆರವು ನೀಡಲಾಗುವುದು’ ಎಂದು ಅವರು ಟ್ವೀಟ್ ಮಾಡಿದ್ದಾರೆ.