ಬೆಂಗಳೂರು : ಕರ್ನಾಟಕದಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 14 ಸಾವಿರಕ್ಕಿಂತ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ಹೌದು, ಕರ್ನಾಟಕದಲ್ಲಿ 5 ವರ್ಷಗಳಲ್ಲಿ 14 ಸಾವಿರಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದು, ಈ ಪೈಕಿ 1,336 ಮಕ್ಕಳು ಇನ್ನೂ ನಿಗೂಢವಾಗಿದ್ದಾರೆ. ಕಿಡ್ನಾಪ್ ಹಾಗೂ ನಿಗೂಢ ಆದವರ ಪೈಕಿ ಹೆಣ್ಣು ಮಕ್ಕಳೇ ಹೆಚ್ಚಾಗಿದ್ದಾರೆ ಎಂದು ರಾಜ್ಯ ಸರ್ಕಾರದ ಮಾಹಿತಿ ಹೊರಬಿದ್ದಿದೆ.
ಈ ವರ್ಷ ಜುಲೈ ಅಂತ್ಯಕ್ಕೆ 2,170 ಮಕ್ಕಳು ನಾಪತ್ತೆಯಾಗಿದ್ದಾರೆ. ಕಾಣೆಯಾದವರ ಮಕ್ಕಳ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ, ಹಾವೇರಿ, ಚಿತ್ರದುರ್ಗ, ತುಮಕೂರು, ಮೈಸೂರು ನಂತರ ಸ್ಥಾನದಲ್ಲಿವೆ.
2020ರಿಂದ ಈವರೆಗೂ ರಾಜ್ಯದಲ್ಲಿ 14,878 ಮಕ್ಕಳು ನಾಪತ್ತೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 13,542 ಪ್ರಕರಣಗಳಲ್ಲಿ ಮಕ್ಕಳು ಪೋಷಕರ ಮಡಿಲಿಗೆ ಸೇರಿದ್ಧಾರೆ. ಬಾಕಿ 1,336 ಮಕ್ಕಳು ನಿಗೂಢವಾಗಿದ್ದಾರೆ. ಅಪಹರಣಕ್ಕೆ ಒಳಗಾದ 10,792 ಹೆಣ್ಣು ಮಕ್ಕಳ ಪೈಕಿ 1,003 ಕಾಣೆಯಾಗಿದ್ದಾರೆ. 4,086 ಗಂಡು ಮಕ್ಕಳ ಪೈಕಿ 333 ಮಕ್ಕಳು ನಿಗೂಢವಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.